ಬೆಂಗಳೂರು
ತೀರಾ ಹಿಂದುಳಿದಿರುವ ಕ್ಷೌರಿಕ ಸಮಾಜದ ಅಭಿವೃದ್ಧಿಗಾಗಿ ಕ್ಷೌರಿಕ ನಿಗಮವನ್ನು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಆಗ್ರಹಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಏರ್ಪಡಿಸಿದ್ದ, ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಹಡಪದ ಸಮುದಾಯ ಅಭಿವೃದ್ಧಿ ಗಾಗಿ ಪ್ರತ್ಯೇಕ ನಿಗಮ ಮಂಡಳಿ ಅವಶ್ಯಕತೆ ಇದೆ ಎಂದರು.ಹಡಪದ ಅಪ್ಪಣ್ಣ ಹೆಸರಿನಲ್ಲಿ ಯೇ ನಿಗಮ ಮಂಡಳಿ ಸ್ಥಾಪಿಸಿ, ಅಭಿವೃದ್ಧಿ ಕಾರ್ಯಕ್ರಮ ರೂಪಿಸಬೇಕು.ಇಲ್ಲದಿದ್ದರೆ, ಸಮಾಜದ ಮುಖಂಡರ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಗಜ್ಯೋತಿ ಬಸವಣ್ಣನವರ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಅಪ್ಪಣ್ಣನವರು ಕೂಡ ಸಲಹೆಗಾರರಾಗಿದ್ದರು. ಬಸವಣ್ಣನವರನ್ನು ಭೇಟಿ ಮಾಡಲು ಬರುವವರು ಅಪ್ಪಣ್ಣನವರ ಅನುಮತಿ ಪಡೆಯಬೇಕಿತ್ತು. ಬಸವಣ್ಣವರೊಂದಿಗೆ ಹಡಪದ ಅಪ್ಪಣ್ಣನವರು ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ನುಡಿದರು.
ಜಮಖಂಡಿಯ ಬಸವ ಆಶ್ರಮದ ಶರಣ ಶ್ರೀ ಈಶ್ವರ್ ಮಂಟೂರ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣನವರು ಅನುಭವ ಮಂಟಪದ ಮಹಾನ್ ಚೇತನರಾಗಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸಮರ್ಪಣಾ ಭಾವದಿಂದ ಸಲ್ಲಿಸಿದ ಸೇವೆ ಅವರ್ಣನೀಯ ಎಂದು ತಿಳಿಸಿದರು.
ಅನುಭವ ಮಂಟಪ ಹಾಗೂ ಬಸವಣ್ಣನವರ ಕಾಯಕಕ್ಕೆ ಹಡಪದ ಅಪ್ಪಣ್ಣನವರು ಆಧಾರ ಸ್ತಂಭರಾಗಿದ್ದರು. ಬಸವಣ್ಣನವರ ಕಾರ್ಯಭಾರದಲ್ಲಿ ತಮ್ಮದೇ ಆದ ಸೇವೆಯ ಮೂಲಕ ಹಡಪದ ಅಪ್ಪಣ್ಣನವರು ಪ್ರಸಿದ್ಧರಾಗಿದ್ದರು. ತಾತ್ವಿಕ ಚಿಂತನೆ ಒಳಗೊಂಡ ವಚನಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಮಾತನಾಡಿ, 12ನೇ ಶತಮಾನದಲ್ಲಿ ವಚನ ಸಾಹಿತ್ಯ ಹಾಗೂ ಕಾಯಕ,ಶ್ರಮ ಸಂಸ್ಕೃತಿಯಲ್ಲಿ ತನ್ನದೇ ಆದ ಇತಿಹಾಸ ಸೃಷ್ಟಿಸಿದ, ಹಡಪದ ಅಪ್ಪಣ್ಣ ಎಲ್ಲರಿಗೂ ಆದರ್ಶ ಪುರಷ ಎಂದು ಬಣ್ಣಿಸಿದರು.ಹಡಪದ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸದೃಢವಾಗಬೇಕಿದೆ.
ಆ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಶ್ರಮಿಸಬೇಕು. ಯಾವುದೇ ಉದ್ಯೋಗ ಕೀಳು ಮಟ್ಟದ್ದಲ್ಲ. ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಬೆಲೆ ಇದೆ. ಎಲ್ಲ ವೃತ್ತಿಗಳೂ ಸೇರಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.ಕಾರ್ಯಕ್ರಮಕ್ಕೂ ಮೊದಲು ಜಾನಪದ ವೈವಿಧ್ಯಮಯ ಕಲಾತಂಡದ ಸದಸ್ಯರು, ಇಲ್ಲಿನ ಪುರಭವನದಿಂದ ರವೀಂದ್ರ ಕಲಾಕ್ಷೇತ್ರವರೆಗೂ ಮೆರವಣಿಗೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








