ಚಿತ್ರದುರ್ಗ:
ಬರಪೀಡಿತ ಚಿತ್ರದುರ್ಗ ಜಿಲ್ಲೆ ರೈತರ ಬೆಳೆ ವಿಮೆ, ಬೆಳೆ ನಷ್ಟ, ಇನ್‍ಪುಟ್ ಸಬ್ಸಡಿ, ಸಾಲ ಮನ್ನಾ ಯೋಜನೆಯನ್ನು ರೈತರಿಗೆ ತಲುಪಿಸುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಬೆಳೆ ವಿಮೆ ಕಂಪನಿಗಳ ವಿರುದ್ದ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರಧಾನಮಂತ್ರಿ ಫಸಲ್‍ಭೀಮ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಇನ್ನು ಅನೇಕ ಬೆಳೆಗಳಿಗೆ ವಿವಿಧ ಬ್ಯಾಂಕ್‍ಗಳಲ್ಲಿ ನೊಂದಣಿ ಮಾಡಿಸಿರುವ 2017-18, 2018-19 ನೇ ಸಾಲಿನ ಬೆಳೆವಿಮೆಯನ್ನು ಕಂಪನಿಗಳು ಇನ್ನು ರೈತರಿಗೆ ಪಾವತಿಸಿಲ್ಲ. ಸಕಾಲಕ್ಕೆ ಮಳೆಯಿಲ್ಲದೆ ಶೇ.90 ರಷ್ಟು ಬೆಳೆಗಳು ನಷ್ಟವಾಗಿದ್ದರೂ ವಿಮಾ ಕಂಪನಿಗಳು ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಜಮಾ ಮಾಡಲು ಮೀನಾಮೇಷ ಎಣಿಸುತ್ತಿರುವುದರ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ರೈತರು ಕೃಷಿಯ ಸಹವಾಸವೇ ಬೇಡವೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಪ್ರತಿಭಟನಾನಿರತ ರೈತರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತಕ್ಕೆ ತೋಡಿಕೊಂಡರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ಜಿಲ್ಲೆಯ ರೈತರಿಗೆ ಬೆಳೆವಿಮೆ ಪಾವತಿಸುವಂತೆ ಬಸ್ಸುಗಳಲ್ಲಿ ನೂರಾರು ರೈತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದರೂ ವಿಮೆ ಕಂಪನಿಗಳು ಇನ್ನು ಬೆಳೆವಿಮೆಯನ್ನು ರೈತರ ಖಾತೆಗೆ ಜಮಾ ಮಾಡಿಲ್ಲ. ಈ ವರ್ಷ ಮುಂಗಾರು ಮಳೆಯೂ ಇಲ್ಲ. ಇಲ್ಲಿಯತನಕ ಒಂದೆ ಒಂದು ಹದಮಳೆಯೂ ಬಂದಿಲ್ಲ. ರೈತರ ಬೋರ್‍ವೆಲ್‍ಗಳು ಬತ್ತಿಹೋಗಿದೆ.
ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದರೂ ವಿಮೆ ಕಂಪನಿಗಳು ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಜಮಾ ಮಾಡಲು ಸತಾಯಿಸುತ್ತಿವೆ. ಇತ್ತ ಬೆಳೆ ನಷ್ಟದ ಪರಿಹಾರವೂ ಇಲ್ಲ. ಅತ್ತ ಸಾಲ ಮನ್ನ ಯೋಜನೆಯಡಿ ಬ್ಯಾಂಕ್‍ಗಳಿಗೆ ಬಂದಿರುವ ಹಣ ವಾಪಸ್ ಹೋಗುತ್ತಿದೆ ಎಂದು ರೈತರ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನ ಸೆಳೆದರು.
ಇನ್ನು ಎರಡು ದಿನದೊಳಗೆ ವಿಮೆಹಣ, ಬೆಳೆ ನಷ್ಟದ ಪರಿಹಾರ, ಸಾಲ ಮನ್ನ ಬ್ಯಾಂಕ್ ಖಾತೆಗಳಿಗೆ ಜಮಾ ಆಗದಿದ್ದರೆ ರೈತರು ಮಾಡಿಕೊಳ್ಳುವ ಆತ್ಮಹತ್ಯೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇರ ಹೊಣೆ ಹೊರಬೇಕಾಗುತ್ತದೆಂದು ಕೆ.ಪಿ.ಭೂತಯ್ಯ ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ಆರ್.ಎ.ದಯಾನಂದಮೂರ್ತಿ, ಆರ್.ಎಸ್.ಅಮರೇಶ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.