ನವದೆಹಲಿ
ತೃಣಮೂಲ ಕಾಂಗ್ರೆಸ್ ಸಂಸದ ಶತಾಬ್ದಿ ರಾಯ್, ಪಕ್ಷದ ಅಮಾನತುಗೊಂಡ ನಾಯಕ ಕುನಾಲ್ ಘೋಷ್ ಸೇರಿದಂತೆ ಆರು ಮಂದಿಗೆ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಶಾರದಾ ಹಗರಣದ ಸೂತ್ರದಾರ ಸುದೀಪ್ತಾ ಸೇನ್ ಅವರ ಆಪ್ತ ಅರಿಂದಮ್ ದಾಸ್, ಇಬ್ಬರು ಉದ್ಯಮಿಗಳು, ಪೂರ್ವ ಬಂಗಾಳ ಫುಟ್ಬಾಲ್ ಕ್ಲಬ್ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿದೆ. 10 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಆರು ಮಂದಿಯ ಪೈಕಿ ಘೋಷ್, ಸರ್ಕಾರ್, ದಾಸ್ ಮತ್ತು ಸಂಧೀರ್ ಅಗರ್ವಾಲ್ ಅವರನ್ನು ಪ್ರಕರಣದಲ್ಲಿ ಬಂಧಿಸಲಾಗಿದ್ದು, ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿದೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಟಿಎಂಸಿಯ ಹಾಲಿ ಸಂಸದ ರಾಯ್ ಅವರನ್ನು ಕಳೆದ ವಾರ ಇಡಿ ಹಾಜರಾಗಲು ಸೂಚಿಸಿತ್ತು. ಆದರೆ ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಉಲ್ಲೇಖಿಸಿ ವಿಚಾರಣೆಗೆ ಅವರು ಏಜೆನ್ಸಿಯ ಮುಂದೆ ಹಾಜರಾಗಲಿಲ್ಲ.