ಮುಂಬಡ್ತಿಯಲ್ಲಿ ಅನ್ಯಾಯ ಸರಿಪಡಿಸಲು ಆಗ್ರಹ

ಚಿತ್ರದುರ್ಗ

       ಮುಂಬಡ್ತಿಯಲ್ಲಾಗುತ್ತಿರುವ ಅನ್ಯಾಯ ಹಾಗೂ ಬೇರೆ ಇಲಾಖೆಯ ಕೆಲಸದ ಒತ್ತಡವನ್ನು ನಮ್ಮ ಮೇಲೆ ಹೇರಬಾರದೆಂದು ನೂರಾರು ಗ್ರಾಮ ಲೆಕ್ಕಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.

       ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಜಿಲ್ಲಾ ಶಾಖೆ ವತಿಯಿಂದ ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಅನ್ಯ ಇಲಾಖೆಯ ಕೆಲಸದ ಹೊರೆ ನಮ್ಮ ಮೇಲೆ ಹೇರುತ್ತಿರುವುದು ನಿಲ್ಲಬೇಕು ಎಂದು ಒತ್ತಾಯಿಸಿದರು.

      ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರಬಾರದೆಂದು ಸರ್ಕಾರವೇ ಆದೇಶ ಮಾಡಿದ್ದರೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾರ್ವತ್ರಿಕ ರಜೆ ದಿನದಂದು ಕೆಲಸ ಹೇಳುವುದರಿಂದ ಕುಟುಂಬದ ಜೊತೆ ರಜೆಯ ದಿನಗಳಲ್ಲಿಯೂ ಸಂತೋಷವಾಗಿರಲು ಆಗುತ್ತಿಲ್ಲ. ಇದರಿಂದ ಕುಟುಂಬ ಕಲಹಗಳುಂಟಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಪ್ರತಿಭಟನಾನಿರತ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಸಂಕಷ್ಟಗಳನ್ನು ಸರ್ಕಾರಕ್ಕೆ ಹೇಳಿಕೊಂಡರು.

      ಮುಂಬಡ್ತಿಯಲ್ಲಾಗುತ್ತಿರುವ ಅನ್ಯಾಯ ಸರಿಪಡಿಸಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮತ್ತು ಗ್ರಾಮ ಲೆಕ್ಕಿಗರ ಜೇಷ್ಟತೆಗಳನ್ನು ಒಟ್ಟುಗೂಡಿಸಿ ಪದನವೀಕರಿಸುವುದು.ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆಯನ್ನು ಒಂದು ಸಾವಿರ ರೂ.ಗಳಿಗೆ ಹೆಚ್ಚಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತೀರ್ಮಾನಿಸಿದ್ದಾರೆ. ರಾಜ್ಯ ಸಂಘ ಒಂದು ಸಾವಿರ ರೂ. ಹೆಚ್ಚಿಸಲು ಆರನೇ ವೇತನ ಆಯೋಗಕ್ಕೂ ಮನವಿ ನೀಡಿದೆ. ಸರ್ಕಾರ ಕೇವಲ ಮುನ್ನೂರರಿಂದ ಆರುನೂರುಗಷ್ಟು ಮಾತ್ರ ಹೆಚ್ಚಿಸಿದೆ. ಪುನರ್‍ಪರಿಶೀಲಿಸಿ ಒಂದು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು.ಪರಿಷ್ಕೃತ ಜಾಜ್‍ಚಾರ್ಟ್ ನೀಡಬೇಕು.

     ಮರಳು ದಂದೆಕೋರರು ಲಾರಿ ಹರಿಸಿ ಹತ್ಯೆಗೈದಿರುವ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ಕುಟುಂಬಕ್ಕೆ ಇನ್ನು ವಿಶೇಷ ಪರಿಹಾರ ಮಂಜೂರಾಗಿಲ್ಲ. ಕೂಡಲೆ ಇಪ್ಪತ್ತು ಲಕ್ಷ ರೂ.ವಿಶೇಷ ಪರಿಹಾರವನ್ನು ನೀಡಬೇಕು.ಗ್ರಾಮ ಸಹಾಯಕರ ಹುದ್ದೆಯನ್ನು ಖಾಯಂಗೊಳಿಸಬೇಕು. ಇಷ್ಟೆಲ್ಲಾ ನಮ್ಮ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಬೆಂಗಳೂರಿನಲ್ಲಿ ಕುಟುಂಬ ಸಮೇತ ಅನಿರ್ಧಿಷ್ಟಾವಧಿ ದರಣಿ ನಡೆಸುವುದಾಗಿ ಪ್ರತಿಭಟನಾನಿರತ ಗ್ರಾಮ ಲೆಕ್ಕಾಧಿಕಾರಿಗಳು ಎಚ್ಚರಿಕೆ ನೀಡಿದರು.

     ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಲಕ್ಷ್ಮಿಪತಿ, ಉಪಾಧ್ಯಕ್ಷ ಎಂ.ಪ್ರಭಾಕರ, ಪ್ರಧಾನ ಕಾರ್ಯದರ್ಶಿ ಎಸ್.ಗಂಗಾಧರ್, ಗೌರವಾಧ್ಯಕ್ಷ ಕರಿಯಪ್ಪ, ಸಂಘಟನಾ ಕಾರ್ಯದರ್ಶಿ ಆರ್.ರಂಗನಾಥ್, ರಾಜ್ಯ ಪರಿಷತ್ ಸದಸ್ಯರು, ನಿರ್ದೇಶಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link