ರಷ್ಯಾ ಸೇನೆಯ ಆಕ್ರಮಣ ತಡೆಯಲು ಸೇತುವೆಯ ಮೇಲೆ ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಸೈನಿಕ

 ಉಕ್ರೇನ್​ ನತ್ತ ರಷ್ಯಾ ಪಡೆಗಳು ಮುನ್ನುಗ್ಗುತ್ತಿವೆ. ರಷ್ಯಾದ ಆಕ್ರಮಣವನ್ನು ನಿಧಾನಗೊಳಿಸುವ ದೃಷ್ಟಿಯಿಂದ ಉಕ್ರೇನ್ ಸೇನೆ ದಕ್ಷಿಣ ಪ್ರಾಂತ್ಯದ ಹೆನಿಚೆಸ್ಕ್ ಸೇತುವೆ ಸ್ಫೋಟಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದರಲ್ಲಿ ಸೈನಿಕನೊಬ್ಬ ಪ್ರಾಣಾರ್ಪಣೆ ಮಾಡಿದ್ದಾನೆ.

ಕೈವ್: ರಷ್ಯಾದ ಟ್ಯಾಂಕರ್​​ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಒಬ್ಬ ಉಕ್ರೇನಿಯನ್ ಸೈನಿಕ ಪ್ರಾಣಾರ್ಪಣೆ ಮಾಡಿದ್ದಾನೆ. ಪ್ರಸ್ತುತ ರಷ್ಯಾ ಆಕ್ರಮಿಸಿಕೊಂಡಿರುವ ಕ್ರೈಮಿಯಾ ಪ್ರದೇಶದಿಂದ ರಷ್ಯನ್ ಪಡೆಗಳು ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಸೇತುವೆಯನ್ನು ಸ್ಫೋಟಿಸುವ ನಿರ್ಧಾರಕ್ಕೆ ಬರಲಾಯಿತು.

ಉಕ್ರೇನಿಯನ್ ಮಿಲಿಟರಿಯ ಹೇಳಿಕೆಗಳ ಪ್ರಕಾರ ರಷ್ಯಾದ ಟ್ಯಾಂಕರ್​​ಗಳು ಆಕ್ರಮಣ  ಮಾಡಿದಾಗ ಮೆರೈನ್ ಬೆಟಾಲಿಯನ್ ಎಂಜಿನಿಯರ್ ಆಗಿದ್ದ ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್ ಅವರನ್ನು ದಕ್ಷಿಣ ಪ್ರಾಂತ್ಯದ ಖೆರ್ಸನ್‌ನಲ್ಲಿರುವ ಹೆನಿಚೆಸ್ಕ್ ಸೇತುವೆಗೆ ನಿಯೋಜಿಸಲಾಯಿತು.

ರಷ್ಯಾದ ಟ್ಯಾಂಕ್‌ಗಳನ್ನು ತಡೆಯುವ ಏಕೈಕ ಮಾರ್ಗವೆಂದರೆ ಸೇತುವೆಯನ್ನು ಸ್ಫೋಟಿಸುವುದು ಎಂದು ಸೈನ್ಯವು ನಿರ್ಧರಿಸಿತು. ಅದರಂತೆ, ವೊಲೊಡಿಮಿರೊವಿಚ್ ಈ ಕಾರ್ಯವನ್ನು ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದರು ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೇತುವೆಯನ್ನು ಸ್ಫೋಟಿಸುವಾಗ ತಕ್ಷಣ ಮರಳಲು ಸಾಧ್ಯವಿಲ್ಲ ಎನ್ನುವುದನ್ನು ವೊಲೊಡಿಮಿರೊವಿಚ್ ಅರಿತುಕೊಂಡರು. ಈ ಘಟನೆಯಲ್ಲಿ ಅವರು ಪ್ರಾಣಾರ್ಪಣೆ ಮಾಡಿದರು. ಅವರ ಪರಾಕ್ರಮದಿಂದ ರಷ್ಯಾದ ಪಡೆಗಳು ಸುತ್ತು ಮಾರ್ಗವನ್ನು ಬಳಸಿ ಮುಂದುವರೆಯುವುದು ಅನಿವಾರ್ಯವಾಯಿತು. ಇದರಿಂದಾಗಿ ಉಕ್ರೇನಿಯನ್ ಮಿಲಿಟರಿಗೆ ರಷ್ಯಾ ಸೈನಿಕರನ್ನು ಎದುರಿಸಲು ಮತ್ತಷ್ಟು ಸಮಯ ಸಿಕ್ಕಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಉಕ್ರೇನ್ ಮಿಲಿಟರಿ ಪಡೆ ಹೇಳಿದ್ದೇನು?

‘ಈ ಕಷ್ಟದ ದಿನದಂದು ಎಲ್ಲಾ ದಿಕ್ಕುಗಳಲ್ಲಿಯೂ ಆಕ್ರಮಣ ಮಾಡಿದ ರಷ್ಯನ್ ಆಕ್ರಮಣಕಾರರಿಗೆ ಉಕ್ರೇನಿಯನ್ನರು ಬಿಟ್ಟುಕೊಡಬೇಕಾಯಿತು. ಇದರಲ್ಲಿ ಶತ್ರು ನೌಕಾಪಡೆಯನ್ನು ಮೊದಲು ಎದುರಿಸುವ ಕ್ರೈಮಿಯನ್ ಇಂಟರ್​ಸೆಕ್ಷನ್ ಕೂಡ ಒಂದು. ರಷ್ಯನ್ ಟ್ಯಾಂಕರ್​ಗಳನ್ನು ಎದುರಿಸುವ ಸಂದರ್ಭದಲ್ಲಿ ಗೆನಿಚೆ ಸೇತುವೆಯನ್ನು ಸ್ಫೋಟಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಉಕ್ರೇನ್ ಸೇನೆ ಬರೆದುಕೊಂಡಿದೆ.

”ಈ ಕಾರ್ಯವನ್ನು ನಿರ್ವಹಿಸಲು ಪ್ರತ್ಯೇಕ ಬೆಟಾಲಿಯನ್ ನಾವಿಕ ಇಂಜಿನಿಯರ್ ಸ್ಕಕುನ್ ವಿಟಾಲಿ ವೊಲೊಡಿಮಿರೊವಿಚ್‌ನ ಅವರನ್ನು ಕರೆಯಲಾಯಿತು. ಸೇತುವೆಯನ್ನು ಸ್ಫೋಟಿಸುವ ಸಂದರ್ಭ ಅಲ್ಲಿಂದ ಹೊರಬರಲು ಅವರಿಗೆ ಸಮಯವಿರಲಿಲ್ಲ, ತಕ್ಷಣವೇ ಸ್ಫೋಟ ಸಂಭವಿಸಿತು.

ನಮ್ಮ ಸಹೋದರ ಇದರಲ್ಲಿ ಪ್ರಾಣಾರ್ಪಣೆ ಮಾಡಿದ್ದಾನೆ. ಇದರಿಂದ ನಮ್ಮ ಘಟಕಗಳನ್ನು ಸ್ಥಳಾಂತರಿಸಲು ಸಮಯಾವಕಾಶ ದೊರೆಯಿತು ಮತ್ತು ರಷ್ಯನ್ ಪಡೆಗಳ ಚಲನೆ ನಿಧಾನಗೊಂಡಿತು”

”ನಾವು ಬದುಕಿರುವವರೆಗೂ ಹೋರಾಡುತ್ತೇವೆ. ಮತ್ತು ಜೀವಂತವಾಗಿರುವವರೆಗೂ ಹೋರಾಡುತ್ತೇವೆ” ಎಂದು ಮಿಲಿಟರಿ ತನ್ನ ಹೇಳಿಕೆ ಮುಕ್ತಾಯಗೊಳಿಸಿದೆ. ಪ್ರಾಣಾರ್ಪಣೆಗೈದ ಯೋಧ ಸ್ಕಕುನ್ ವಿಟಾಲಿ ವೊಲೊಡಿಮಿರೊವಿಚ್ ಅವರಿಗೆ ಶೌರ್ಯ ಹಾಗೂ ಹೋರಾಟಕ್ಕಾಗಿ ಮರಣೋತ್ತರ ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಲಾಗಿದೆ.

ಉಕ್ರೇನ್ ಸೇನೆ ಹಂಚಿಕೊಂಡ ಪೋಸ್ಟ್:

ಇದುವರೆಗೆ ಸುಮಾರು 3,500 ರಷ್ಯನ್ ಸೈನಿಕರನ್ನು ಕೊಲ್ಲಲಾಗಿದೆ. 102 ಟ್ಯಾಂಕರ್​ಗಳು ಹಾಗೂ 14 ಪ್ಲೇನ್​ಗಳನ್ನು ನಾಶಮಾಡಲಾಗಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap