ನವದೆಹಲಿ:
ದೆಹಲಿಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲು ಮನಸ್ಸು ಮಾಡಿದ್ದರೆ INDIA ಒಕ್ಕೂಟದಿಂದ ಹೊರ ಬರುವುದಾಗಿ ಆಮ್ ಆದ್ಮಿ ಪಕ್ಷ ಬುಧವಾರ ಎಚ್ಚರಿಕೆ ನೀಡಿದೆ. ಕಾಂಗ್ರೆಸ್ ಮತ್ತು ಎಎಪಿ ವಿರೋಧಪಕ್ಷಗಳ ಒಕ್ಕೂಟವಾದ INDIAದ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ)ಸದಸ್ಯ ಪಕ್ಷಗಳಾಗಿವೆ.
ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಹೇಳಿಕೆ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ನಡೆಯಲಿರುವ INDIA ಒಕ್ಕೂಟದ ಮೂರನೇ ಸಭೆಯಲ್ಲಿ ಪಾಲ್ಗೊಳ್ಳಲುವ ಕುರಿತು ಪಕ್ಷದ ಉನ್ನತ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಎಎಪಿ ಮುಖ್ಯ ವಕ್ತಾರ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತೆ ಪರಾಮರ್ಶೆಗಾಗಿ ದೆಹಲಿ ಕಾಂಗ್ರೆಸ್ ನಾಯಕರು ಬುಧವಾರ ಪಕ್ಷದ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಿದ್ದು, ಪಕ್ಷ ಸಂಘಟನೆಯನ್ನು ಬಲಪಡಿಸುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಚರ್ಚಿಸಿದ್ದಾರೆ. ಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಮುಖಂಡರು ಒಗ್ಗಟ್ಟಾಗಿ ಮತ್ತು ಜನರೊಂದಿಗೆ ಸಂಪರ್ಕದಲ್ಲಿರಲು ಹೇಳಿದರು ಎಂದು ಮೂಲಗಳು ತಿಳಿಸಿವೆ.








