ಲಂಡನ್:
ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ಹೊಂದಿರುವ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಮತ್ತೊಂದು ಶತಕದ ದಾಖಲೆ ಬರೆದಿದ್ದಾರೆ. ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ 41 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
ಜುಲೈ 24, ಗುರುವಾರ ರಾತ್ರಿ ಲೀಸೆಸ್ಟರ್‌ನ ಗ್ರೇಸ್ ರೋಡ್‌ನಲ್ಲಿ ನಡೆದ ಇಂಗ್ಲೆಂಡ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶನ ತೋರಿದ ಎಬಿಡಿ 41 ಎಸೆತಗಳಲ್ಲಿ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡಕ್ಕೆ ಹತ್ತು ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದು ಕೆಲವು ವರ್ಷಗಳಾಗಿದ್ದರೂ ಕೂಡ ಎಬಿಡಿ ತನ್ನ ಬ್ಯಾಟಿಂಗ್ ಪ್ರಾಬಲ್ಯವನ್ನು ಮಾತ್ರ ಮರೆತಿಲ್ಲ.ಇಂಗ್ಲೆಂಡ್ ತಂಡ ನೀಡಿದ 153 ರನ್‌ಗಳ ಬೆನ್ನಟ್ಟುವ ವೇಳೆ ಕ್ರೀಸ್‌ಗಿಳಿದ ಎಬಿಡಿ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಅವರು ಎರಡನೇ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಇನ್ನಿಂಗ್ಸ್ ಆರಂಭಿಸಿದರು. ನಂತರ ಮತ್ತೊಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು.
ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ ಎಬಿಡಿ ಒಟ್ಟು 51 ಎಸೆತ ಎದುರಿಸಿದ ಅವರು ಬರೋಬ್ಬರಿ 7 ಸಿಕ್ಸರ್ ಮತ್ತು 15 ಬೌಂಡರಿ ಸಿಡಿಸಿ ಅಜೇಯ 116 ರನ್ ಗಳಿಸಿದರು. ಹಾಶಿಮ್ ಆಮ್ಲಾ (25 ಎಸೆತಗಳಲ್ಲಿ 29*) ಗಳಿಸಿದರು.
