ಈ ಸಲ ಕಪ್‌ ನಮ್ದೆ’ ಎಂದು ಕರೆಯಬೇಡಿ : ಎಬಿಡಿ

ನವದೆಹಲಿ:

    ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಫ್ಯಾನ್‌ ಫಾಲೋವರ್ಸ್‌ ಹೊಂದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚೊಚ್ಚಲ ಕಪ್‌ ಗೆಲ್ಲಲು ತಯಾರಿ ನಡೆಸುತ್ತಿದೆ. ಇದರ ನಡುವೆ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್‌ ಹಾಗೂ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌, ತಮ್ಮ ಗೆಳೆಯ ವಿರಾಟ್‌ ಕೊಹ್ಲಿ ತಮಗೆ ಕಳುಹಿಸಿರುವ ವಿಶೇಷ ಸಂದೇಶವನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್‌ ಆರಂಭವಾಗಿ 17 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದ್ದರೂ ಆರ್‌ಸಿಬಿ ತಂಡ ಇನೂ ಒಂದೇ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ ಎಂಬುದು ಅಭಿಮಾನಿಗಳ ಪಾಲಿಗೆ ಬೇಸರದ ಸಂಗತಿಯಾಗಿದೆ.

   ಎಬಿ ಡಿ ವಿಲಿಯರ್ಸ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ 2011 ರಿಂದ 2021ರವರೆಗೆ ಒಟ್ಟು 11 ಆವೃತ್ತಿಗಳನ್ನು ಆಡಿದ್ದಾರೆ. ಎಲ್ಲಿಯೂ ಈ ಸಲ ಕಪ್‌ ನಮ್ದೆ ಎಂದು ಎಲ್ಲಿಯೂ ಹೇಳಬೇಡಿ ಎಂದು ವಿರಾಟ್‌ ಕೊಹ್ಲಿ ನನಗೆ ಸಂದೇಶವನ್ನು ಕಳುಹಿಸಿದ್ದಾರೆ. ಈ ಬಾರಿ ಏನಾದರೂ ಆರ್‌ಸಿಬಿ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಗೆದ್ದರೆ, ತಾವು ಕೂಡ ಈ ಸಂಭ್ರಮದಲ್ಲಿ ಭಾಗವಹಿಸುವುದಾಗಿ ದಕ್ಷಿಣ ಆಫ್ರಿಕಾ ದಿಗ್ಗಜ ತಿಳಿಸಿದ್ದಾರೆ.

   “ನಾನು ಎಲ್ಲೋ ಒಂದು ಕಡೆ ‘ಈ ಸಲ ಕಪ್‌ ನಮ್ದೆ’ ಎಂದು ಹೇಳಿದ್ದೆ ಹಾಗೂ ನನಗೆ ತಕ್ಷಣ ವಿರಾಟ್‌ ಕೊಹ್ಲಿಯಿಂದ ಸಂದೇಶವೊಂದು ಬಂದಿತ್ತು. ಇಲ್ಲಿಯೂ ಈ ಸಲ ಕಪ್‌ ನಮ್ದೆ ಎಂದು ಹೇಳಬೇಡಿ ಎಂದು ಕೊಹ್ಲಿ ಸಂದೇಶ ಕಳುಹಿಸಿದ್ದಾರೆ. ಒಂದು ವೇಳೆ ಆರ್‌ಸಿಬಿ ಈ ಬಾರಿ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಗೆದ್ದರೆ, ನಾನು ಕೂಡ ಬೆಂಗಳೂರು ತಂಡದ ಸಂಭ್ರಮದಲ್ಲಿ ಭಾಗಿಯಾಗುತ್ತೇನೆ,” ಎಂದು ಎಬಿ ಡಿ ವಿಲಿಯರ್ಸ್‌ ಸ್ಟಾರ್‌ ಸ್ಪೋರ್ಟ್ಸ್‌ ಪ್ರೆಸ್‌ ರೂಮ್‌ ಶೋನಲ್ಲಿ ಬಹಿರಂಗಪಡಿಸಿದ್ದಾರೆ. 

   ಎಬಿ ಡಿವಿಲಿಯರ್ಸ್‌ ಜೊತೆಗೆ ವೆಸ್ಟ್‌ ಇಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌ ಅವರು ಕೂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಸಾಕಷ್ಟು ವರ್ಷಗಳ ಕಾಲ ಐಪಿಎಲ್‌ ಆಡಿದ್ದಾರೆ. ಆದರೆ, ಇವರ ಉಪಸ್ಥಿತಿ ಹೊರತಾಗಿಯೂ ಆರ್‌ಸಿಬಿ ಒಂದೇ ಒಂದು ಬಾರಿ ಐಪಿಎಲ್‌ ಗೆಲ್ಲಲು ಸಾಧ್ಯವಾಗಲಿಲ್ಲ. 2016ರ ಐಪಿಎಲ್‌ ಟೂರ್ನಿಯು ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಪಾಲಿಗೆ ಅತ್ಯಂತ ಶ್ರೇಷ್ಠವಾಗಿತ್ತು. ಈ ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ತಮ್ಮ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನವನ್ನು ತೋರುವ ಮೂಲಕ ಆರ್‌ಸಿಬಿಯನ್ನು ಫೈನಲ್‌ಗೆ ತಲುಪಿಸಿದ್ದರು. ಆದರೆ, ಪ್ರಶಸ್ತಿ ಪಂದ್ಯದಲ್ಲಿ ಆರ್‌ಸಿಬಿ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋಲುವ ಮೂಲಕ ರನ್ನರ್‌ ಅಪ್‌ ಆಗಿತ್ತು. 

   ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿಯೇ ಎಬಿ ಡಿ ವಿಲಿಯರ್ಸ್‌ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಜೊತೆಗೆ ಐಪಿಎಲ್‌ ವೃತ್ತಿ ಜೀವನದಲ್ಲಿಯೇ ಶ್ರೇಷ್ಠ ಅಂಕಿಅಂಶಗಳನ್ನು ಹೊಂದಿದ್ದಾರೆ. ಅವರು ಆರ್‌ಸಿಬಿ ಪರ ತಮ್ಮ ಬಹುತೇಕ ಐಪಿಎಲ್‌ ವೃತ್ತಿ ಜೀವನವನ್ನು ಸವೆಸಿದ್ದಾರೆ. ಎಬಿ ಡಿ ವಿಲಿಯರ್ಸ್‌ ಅವರು ವಿದಾಯ ಹೇಳುವ ಹೊತ್ತಿಗೆ ಆಡಿದ 184 ಪಂದ್ಯಗಳಿಂದ 39.7ರ ಸರಾಸರಿ ಮತ್ತು 151.7ರ ಸ್ಟ್ರೈಕ್‌ ರೇಟ್‌ನಲ್ಲಿ 5162 ರನ್‌ಗಳನ್ನು ಬಾರಿಸಿದ್ದಾರೆ. 133 ರನ್‌ಗಳು ಇವರ ಐಪಿಎಲ್‌ ವೃತ್ತಿ ಜೀವನದ ವೈಯಕ್ತಿಕ ಗರಿಷ್ಠ ಸ್ಕೋರ್‌ ಆಗಿದೆ. ಇದರಲ್ಲಿ ಅವರು ಮೂರು ಶತಕಗಳು ಹಾಗೂ 40 ಅರ್ಧಶತಕಗಳನ್ನು ಸಿಡಿಸಿದ್ದಾರೆ.  

   2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಾರ್ಚ್‌ 22 ರಂದು ಆರಂಭವಾಗಲಿದೆ. ಮುಂದಿನ ಶನಿವಾರ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೂಲಕ ಐಪಿಎಲ್‌ ಟೂರ್ನಿ ಆರಂಭವಾಗಲಿದೆ.