ಕಾರ್ಕಳ :
ಹೊಸ ವರ್ಷಾಚರಣೆಗೆ ಸ್ವಾಗತ ಕೋರಿ ರಸ್ತೆ ಮೇಲೆ “ಹೊಸ ವರ್ಷದ ಶುಭಾಶಯ” ಬರೆಯುತ್ತಿದ್ದಾಗಲೇ ಕಾರು ಢಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ.
ಮೃತರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿಗಳಾದ ಶರಣ್(26) ಮತ್ತು ಸಿದ್ದು(25) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮುದ್ದೇಬಿಹಾಳ ನಿವಾಸಿಗಳಾಗಿರುವ ತೌಸೀಫ್ ಮತ್ತು ಬಸವರಾಜ್ ಎಂಬ ಇನ್ನಿಬ್ಬರು ಗಾಯಗೊಂಡಿದ್ದು, ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷದ ಸಂಭ್ರಮದಲ್ಲಿದ್ದ ಈ ನಾಲ್ವರು ಯುವಕರು ಗುರುವಾರ ರಾತ್ರಿ 10:45ರ ವೇಳೆ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಆರಂಭಿಸಿದ್ದರು. ಈ ವೇಳೆ ಏಕಾಏಕಿ ಬಂದ ಮಾರುತಿ ಇಕೋ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ