ಬೆಂಗಳೂರು
ಆಸಿಡ್ ದಾಳಿಗೊಳಗಾದವರಿಗೆ ಪರಿಹಾರ ಮತ್ತು ಮಾಸಿಕ ಪಿಂಚಣಿ ಹೆಚ್ಚಿಸಿದ ಮಾದರಿಯಲ್ಲೇ ಆಸಿಡ್ ದಾಳಿಗೊಳಗಾದ ಸಂತ್ರಸ್ತರಿಗೆ ಇನ್ನು ಮುಂದೆ ನೋಂದಾಯಿತ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ದೊರೆಯಲಿದೆ.
ನಗದು ರಹಿತ ಚಿಕಿತ್ಸೆಗೆ ಆದೇಶ ಹೊರಡಿಸಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆಸಿಡ್ ದಾಳಿ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸುವರ್ಣ ಆರೋಗ್ಯ ಟ್ರಸ್ಟ್ ನಿಂದ ಆಸಿಡ್ ದಾಳಿಯ ಸಂತ್ರಸ್ತರಿಗೆ ಎಪಿಎಲ್, ಬಿಪಿಎಲ್ ಎಂಬ ಯಾವುದೇ ತಾರತಮ್ಯವಿಲ್ಲದೇ ವಾರ್ಷಿಕ 5 ಲಕ್ಷ ರೂಪಾಯಿ ಮಿತಿಗೊಳಪಟ್ಟು ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಮಂಜೂರಾತಿ ನೀಡಿ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಅವರ ನೇತೃತ್ವದಲ್ಲಿ ಆಸಿಡ್ ದಾಳಿಯ ಸಂತ್ರಸ್ತರಿಗೆ ಕಾನೂನು ಸೇವೆಗಳು ಕುರಿತು ರಚಿಸಲಾದ ಸಮಿತಿ ಈ ಕುರಿತು ಶಿಫಾರಸ್ಸು ಮಾಡಿತ್ತು. ಇದರನ್ವಯ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯನ್ವಯ ನಗದು ರಹಿತ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಆಸಿಡ್ ದಾಳಿ ತಡೆಯಲು ಸರ್ಕಾರ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಕಾನೂನು ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ