ಗಡಿ ಭಾಗದ ಶಾಲೆಗಳು ಮುಚ್ಚದಂತೆ ಕ್ರಮ

ತುಮಕೂರು:

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿಮತ

           ಗಡಿ ಭಾಗದಲ್ಲಿರುವ ಕೆಲವು ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಶಾಲೆಗಳು ಮುಚ್ಚದಂತೆ ಏನು ಬೇಕೋ ಆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ತಿಳಿಸಿದರು.

ಪ್ರಜಾಪ್ರಗತಿ ಮತ್ತು ಪ್ರಗತಿ ಟಿವಿ ಯೊಂದಿಗೆ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು, ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಿದಂತೆಯೇ ಅಲ್ಲಿನ ಖಾಸಗಿ ಶಾಲೆಗಳಿಗೂ ಅನುದಾನ ನೀಡುತ್ತಿದ್ದೇವೆ. ಅಲ್ಲಿನ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬುದು ನಮ್ಮೆಲ್ಲರ ಆಶಯ. ಬಹುಮುಖ್ಯವಾಗಿ ಅಲ್ಲಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ. ಈ ವಿಷಯದ ಬಗ್ಗೆಯೂ ಚರ್ಚಿಸಲಾಗಿದೆ. ಆ ಭಾಗದ ಶಾಲೆಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಎಲ್ಲ ವಿಶ್ವವಿದ್ಯಾಲಯಗಳ ಅಧಿಕಾರಿಗಳ ಸಭೆ ಕರೆಯಲಾಗುತ್ತಿದೆ. ಅವರು ನೀಡುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.

ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪದೆ ಪದೆ ಕೆಲವು ಕಿಡಿಗೇಡಿಗಳು ಕ್ಯಾತೆ ತೆಗೆಯುತ್ತಾ ಬಂದಿದ್ದಾರೆ. ಕಳೆದ ಮಂಗಳವಾರ ಮಹಾರಾಷ್ಟ್ರದ  ಕೊಲ್ಲಾಪುರದಲ್ಲಿ ನಮ್ಮ ಕನ್ನಡದ ನಾಡಧ್ವಜಕ್ಕೆ ಅಲ್ಲಿನ ಕಿಡಿಗೇಡಿಗಳು ಅಗೌರವ ತೋರಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನಾವು ಯಾವತ್ತೂ ಸಂಘರ್ಷಕ್ಕೆ ಆಸ್ಪದ ಕೊಟ್ಟವರಲ್ಲ. ಸಹಬಾಳ್ವೆಯೆ ನಮ್ಮ ಧ್ಯೇಯ. ಹೀಗಿರುವಾಗ ಭಾವನೆಗಳಿಗೆ ಧಕ್ಕೆ ತರುವಂತಹ ಅಸಂವಿಧಾನಿಕ ಕೃತ್ಯಗಳನ್ನು ಕೈಗೊಳ್ಳಬಾರದು ಎಂದರು.

ನಮ್ಮ ಕರ್ನಾಟಕದಲ್ಲಿ ಮಹಾರಾಷ್ಟ್ರದವರು ಇದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದವರು ಇದ್ದಾರೆ. ಎರಡೂ ಕಡೆ ಪರಸ್ಪರ ಗೌರವಯುತವಾಗಿ ನಡೆಸಿಕೊಳ್ಳಬೇಕು. ಅಣ್ಣ ತಮ್ಮಂದಿರಂತೆ ಎರಡೂ ರಾಜ್ಯಗಳು ಇರಬೇಕೇ ಹೊರತು ಕಚ್ಚಾಟ ಒಳ್ಳೆಯದಲ್ಲ. ಒಂದು ವೇಳೆ ಅನ್ಯಾಯವಾಗಿದೆ ಎಂದು ಕಂಡುಬಂದರೆ ಕಾನೂನಾತ್ಮಕವಾಗಿ ಒಂದು ಚೌಕಟ್ಟಿನಲ್ಲಿ ಹೋರಾಡಲು ಅವಕಾಶಗಳಿವೆ. ಕಾನೂನು ಚೌಕಟ್ಟು ಮೀರಿ ಸಂಘರ್ಷಕ್ಕೆ ಇಳಿದರೆ ಸಹಬಾಳ್ವೆಯ ಅರ್ಥವೇ ಹೋಗುತ್ತದೆ. ಜಯ ಭಾರತ ಜನನಿಯ ತನುಜಾತೆ ಎಂಬಂತಹ ನುಡಿಗಳಿಗೆ ಅರ್ಥವೇ ಇರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಭಾಷಾ ಸಾಮರಸ್ಯ ಕಾಪಾಡಿಕೊಂಡು ಕನ್ನಡಿಗರು ಸೌಹಾರ್ದತೆ ಮೆರೆದಿದ್ದಾರೆ. ಕನ್ನಡಿಗರ ಈ ಸೌಜನ್ಯವನ್ನು ಕೆಣಕುವಂತಹ ಹತಾಶಯ ಕುಕೃತ್ಯಗಳು ತುಂಬಾ ಅಸಹನೀಯ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಮಹಾರಾಷ್ಟ್ರದ ವಿವಿಧ ಸಂಘಟನೆಗಳ ಇಂತಹ ಘಟನೆಗಳಿಗೆ ಇತಿಶ್ರೀ ಹಾಡಲು ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಹಬಾಳ್ವೆ ಮುಖ್ಯವಾಗಬೇಕು
ಮಹಾರಾಷ್ಟ್ರದ ಗಡಿಯಲ್ಲಿ ಕೆಲವು ಕಿಡಿಗೇಡಿಗಳು ಪದೆ ಪದೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಹಿತಕರ ಘಟನೆಗಳನ್ನು ಉಂಟು ಮಾಡುತ್ತಿರುವುದು ಖಂಡನಾರ್ಹ. ಕನ್ನಡಿಗರು ಯಾವತ್ತೂ ಸೌಹಾರ್ದ -ಸಹಬಾಳ್ವೆಗೆ ಹೆಸರಾದವರು. ಮಹಾರಾಷ್ಟ್ರದ ಜನ ಕರ್ನಾಟಕದಲ್ಲೂ ಇದ್ದಾರೆ. ಇಲ್ಲಿನವರು ಅಲ್ಲಿಯೂ ಇದ್ದಾರೆ. ಎರಡೂ ಕಡೆ ಪರಸ್ಪರ ಸಹಬಾಳ್ವೆಯ ಪ್ರೀತಿ ಇರಬೇಕೇ ಹೊರತು ಅಶಾಂತಿಯ ವಾತಾವರಣ ಉಂಟಾಗಬಾರದು. ಶಾಂತಿ ಕದಡುತ್ತಿರುವ ಸಂಘಟನೆಗಳು ಹಾಗೂ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು.

   ಸಂದರ್ಶನ: ಸಾ.ಚಿ. ರಾಜಕುಮಾರ 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link