ಹೈದರಾಬಾದ್:
ನಟಿ ರಶ್ಮಿಕಾ ಮಂದಣ್ಣ ಜತೆ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಸ್ಪಲ್ಪದರಲ್ಲೇ ಭಾರಿ ಅನಾಹುತ ತಪ್ಪಿದೆ. ಸೋಮವಾರ, ಸ್ನೇಹಿತರೊಂದಿಗೆ ಪುಟ್ಟಪರ್ತಿ ಸತ್ಯಸಾಯಿ ಬಾಬಾ ಸಮಾಧಿ ದರ್ಶನ ಪಡೆದು ಹೈದರಾಬಾದ್ಗೆ ವಾಪಸ್ ತೆರಳುತ್ತಿದ್ದಾಗ ತೆಲಂಗಾಣದ ಗದ್ವಾಲ್ ಜಿಲ್ಲೆ ಸಮೀಪ ಕಾರು ಅಪಘಾತ ನಡೆದಿದೆ.
ಹೆದ್ದಾರಿಯಲ್ಲಿ ಕಾರಿಗೆ ಬೊಲೆರೋ ವಾಹನ ಡಿಕ್ಕಿಯಾಗಿದ್ದರಿಂದ ಅಪಘಾತ ನಡೆದಿದ್ದು, ನಟನ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ವಿಜಯ್ ದೇವರಕೊಂಡ, ಪುಟ್ಟಪರ್ತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಹೀಗಾಗಿ ಸತ್ಯಸಾಯಿ ಬಾಬಾ ಸಮಾಧಿ ಆಶೀರ್ವಾದ ಪಡೆಯಲು ಅಲ್ಲಿಗೆ ತೆರಳಿದ್ದರು. ದರ್ಶನ ಮುಗಿಸಿಕೊಂಡು ಹೈದರಾಬಾದ್ಗೆ ಹೋಗುವಾಗ ಅಪಘಾತ ನಡೆದಿದೆ. ಅಪಘಾತದ ಬಳಿಕ ನಟ, ಕಾರನ್ನು ಅಲ್ಲೇ ಬಿಟ್ಟು ಸ್ನೇಹಿತನ ಕಾರಿನಲ್ಲಿ ಹೈದರಾಬಾದ್ಗೆ ಪ್ರಯಾಣಿಸಿದ್ದಾರೆ.
ಅಪಘಾತದಲ್ಲಿ ಯಾರೊಬ್ಬರಿಗೂ ಗಾಯಗಳಾಗದಿರುವುದು ಸಮಾಧಾನಕರ ಸಂಗತಿಯಾಗಿದ್ದು, ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ವಿಜಯ್ ಅವರ ಕಾರು ಚಾಲಕ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇನ್ನು ನಿಶ್ಚಿತಾರ್ಥ ನಡೆದು ಮುಂದಿನ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಲು ವಿಜಯ್ ಮತ್ತು ರಶ್ಮಿಕಾ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಈ ಅಪಘಾತ ನಡೆದಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
