ರೈತರ ಜಮೀನನ್ನೇ ಅಡವಿಟ್ಟಿದ್ದ ಅದಾನಿ ಕಂಪನಿ..!

ತುಮಕೂರು:

ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಆಗ್ರಹಕ್ಕೆ ಮಣಿದು ಜಮೀನು ಅಡಮಾನ ರದ್ದು

           ಉದ್ಯಮಿ ಅದಾನಿ ಒಡೆತನಕ್ಕೆ ಸೇರಿದ ಮೆ.ಆದ್ಯ ಸೋಲಾರ್ ಎನರ್ಜಿ ಪ್ರೈವೇಟ್ ಲಿಮಿಟೆಡ್‍ನವರು ಕ್ಯಾತಗಾನಚೆರ್ಲು ಮತ್ತು ವಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ರೈತರು ಸೋಲಾರ್‍ಪಾರ್ಕ್‍ಗಾಗಿ ಗುತ್ತಿಗೆ ಕೊಟ್ಟಿದ್ದ ಜಮೀನನ್ನೇ ಅಡಮಾನವಾಗಿಸಿ ಎಸ್‍ಬಿಐನಲ್ಲಿ 1095 ಕೋಟಿ ಸಾಲ ಪಡೆದು

ನಂತರ ಶಕ್ತಿಸ್ಥಳದ ರೈತರ ಕ್ಷೇಮಾಭಿವೃದ್ಧಿ ಸಂಘದ ಆಗ್ರಹಕ್ಕೆ ಮಾಡಿದು, ರೈತರ ಜಮೀನನ್ನು ಅಡಮಾನದಿಂದ ಮುಕ್ತವಾಗಿಸಿರುವ ಗಂಭೀರ ಪ್ರಕರಣ ಗಡಿ ತಾಲೂಕು ಪಾವಗಡದಲ್ಲಿ ಬೆಳಕಿಗೆ ಬಂದಿದೆ.

ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪಿ.ಸಾಂಬಶಿವರೆಡ್ಡಿ ಹಾಘೂ ಸಂಚಾಲಕ ಡಿ.ಪರಮೇಶ್ವರನಾಯ್ಕ ಅವರುಗಳು,

ಕಳೆದ ತಿಂಗಳು ಡಿ.8ರಂದು ಸದರಿ ಕಂಪನಿಯವರು ತಾಲೂಕಿನ ಎಸ್‍ಬಿಐ ಬ್ಯಾಂಕಿಗೆ ಕ್ಯಾತಗಾನಚೆರ್ಲು ಹಾಗೂ ವಳ್ಳೂರು ಗ್ರಾಮ ವ್ಯಾಪ್ತಿಯ ಬ್ಲಾಕ್ ನಂಬರ್ 1,2, 3, 6, 10 ಮತ್ತು 13ರಲ್ಲಿ ಬರುವ 1500 ಎಕರೆ ಜಮೀನಿನಲ್ಲಿ 300 ಮೆಗಾವ್ಯಾಟ್ ವಿದ್ಯುತ್ ಉತ್ಪತ್ತಿ ಮಾಡುತ್ತಿರುವ ಜಮೀನುಗಳನ್ನು ಪಾವಗಡದ ಎಸ್‍ಬಿಐ ಶಾಖೆಯಲ್ಲಿ ಅಡವಿಟ್ಟು 1095 ಕೋಟಿ ಸಾಲ ಪಡೆಯಲಾಗಿದೆ.

ಈ ಸಂಬಂಧ ಪಾವಗಡದ ನೋಂದಣಾಧಿಕಾರಿ ಕಚೇರಿಯಲ್ಲಿ ಡಿಟಿಡಿ ಮಾಡಿಸಿದ ಮಾಹಿತಿ ಭೂ ಮಾಲೀಕರಾದ ರೈತರಿಗೆ ದೊರೆತು ಸಂಘದ ಗಮನಕ್ಕೆ ತಂದರು. ನಾವು ತಕ್ಷಣವೇ ಇಂಧನ ಸಚಿವರಿಗೆ, ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಹಾಗೂ ಸೋಲಾರ್ ಪಾರ್ಕ್ ಜವಾಬ್ದಾರಿ ಹೊತ್ತ ಕೆಎಸ್‍ಪಿಡಿಸಿಎಲ್‍ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದು, ತಕ್ಷಣ ರೈತರ ಜಮೀನು ಅಡವಿಟ್ಟಿರುವ ಭೋಗ್ಯ ವಗೈರೆ ಪತ್ರಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದೆವು.

ಅ ದರಂತೆ ಡಿ.13 ರಂದು ಸಭೆ ನಡೆಸಿದ ಕೆಎಸ್‍ಪಿಡಿಸಿಎಲ್ ಸಿಇಓ ಶ್ರೀನಿವಾಸಪ್ಪ ಅವರು ಕಂಪನಿ ಈರೀತಿ ಮಾಡಿರುವುದು ಕಾನೂನು ಬಾಹಿರವಾಗಿದ್ದು, ಒಂದು ವಾರದೊಳಗೆ ಸದರಿ ಅಡಮಾನ ಒಪ್ಪಂದಗಳನ್ನು ರದ್ದು ಮಾಡಬೇಕೆಂದು ಸೂಚಿಸಿದ್ದರು. ಆದರೆ ಒಂದು ವಾರ ಕಳೆದರೂ ಒಪ್ಪಂದ ರದ್ದಾಗಿರಲಿಲ್ಲ. ಕಡೆಗೆ ರೈತರು ಸಭೆ ನಡೆಸಿ ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಸಿದ್ದರಿಂದ ಡಿ.6ರಂದು ನೋಂದಣಿ ಸಂಖ್ಯೆ 4737ರ ಅಡಿ ಅಡಮಾನ ರದ್ದಾಗಿದೆ ಎಂದರು.

ನೆರವು: ರೈತರ ಹಿತಕಾಯಲು ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಸದಾ ಶ್ರಮಿಸುತ್ತಿದ್ದು, ಕೆಎಸ್‍ಪಿಡಿಸಿಎಲ್ ತುರ್ತಾಗಿ ರೈತರಿಗೆ ನೆರವಾಗಿದ್ದನ್ನು ಸಂಘ ಸ್ಮರಿಸುತ್ತದೆ ಎಂದರು.

ಅಡಮಾನ ರದ್ದತಿಯಷ್ಟೇ ಸಾಕೇ? ತಪ್ಪಿತಸ್ಥರ ಮೇಲೆ ಕ್ರಮವಿಲ್ಲವೇ?

ಗಡಿ ತಾಲೂಕು ಪಾವಗಡದಲ್ಲಿ ಸೋಲಾರ್ ಪಾರ್ಕ್‍ಗಾಗಿ ಗುತ್ತಿಗೆ ನೀಡಿದ್ದ ರೈತರ ಜಮೀನನ್ನು ಅವರ ಅನುಮತಿಯಿಲ್ಲದೆ ಕಾನೂನು ಗಾಳಿಗೆ ತೂರಿ ಮೆ.ಆದ್ಯ ಸೋಲಾರ್‍ಪಾರ್ಕ್ ಎನರ್ಜಿ ಸಂಸ್ಥೆಯವರು ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ಅಡಮಾನ ಇಟ್ಟಿ ಸಾವಿರ ಕೋಟಿ ಅಧಿಕ ಸಾಲ ಪಡೆದಿದ್ದು ಗಂಭೀರ ಪ್ರಮಾದವಾಗಿದ್ದು, ಪ್ರಕರಣ ಬೆಳಕಿಗೆ ಬಂದ ಮೇಲೆ ರೈತರ ಒತ್ತಾಯದ ಮೇರೆಗೆ ಅಡಮಾನ ರದ್ದತಿ ಮಾಡಿರುವುದು ಸರಿಯಷ್ಟೆ.

ಆದರೆ ಇಂಧನ ಇಲಾಖೆ, ನಿಗಮದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಶಾಮೀಲಾಗದೆ ನಡೆಯಲು ಸಾಧ್ಯವೇ ಎಂಬ ಅನುಮಾನಗಳು ಹುಟ್ಟಿದ್ದು, ಇದು ಬೆಳಕಿಗೆ ಬಂದ ಒಂದು ಕಂಪನಿ ಪ್ರಕರಣವಷ್ಟೇ. ಶಕ್ತಿಸ್ಥಳದಲ್ಲಿ ಮತ್ತಷ್ಟು ಪ್ರಭಾವಿಗಳ ಒಡೆತನದ ಕಂಪನಿಗಳಿದ್ದು ಅವುಗಳ ರೈತರ ಹೆಸರಿನಲ್ಲಿ ಇನ್ನಷ್ಟು ಗೋಲ್‍ಮಾಲ್ ಮಾಡಿರಬಹುದಾ ಎಂಬ ಅನುಮಾನಗಳಿಗೆ ಎಡೆಮಾಡಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುವ ಅವಶ್ಯಕತೆ ಇದೆ. ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap