ಕೋಲ್ಕತ್ತಾ:
ಕಾಂಗ್ರೆಸ್ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಅದೀನಾ ಮಸೀದಿಗೆ ಭೇಟಿ ನೀಡಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ. ಅದೀನಾ ಮಸೀದಿಯ ಬಗ್ಗೆ ಬಿಜೆಪಿ ನೀಡಿರುವ ಪ್ರತಿಕ್ರಿಯೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಅದೀನಾ ಮಸೀದಿಯನ್ನು ಬಿಜೆಪಿ ಆದಿನಾಥ ದೇವಾಲಯ ಎಂದು ಕರೆದಿದೆ. ಅನೇಕರು ಇದಕ್ಕೆ ಕಾಮೆಂಟ್ ಮಾಡಿದ್ದು, ಮಸೀದಿಯ ಇತಿಹಾಸದ ಬಗ್ಗೆ ವರ್ಣನೆಯನ್ನೂ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಪ್ರಾಚೀನ ಅದೀನಾ ಮಸೀದಿಗೆ ಭೇಟಿ ನೀಡಿದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಸೀದಿಯನ್ನು ಬಿಜೆಪಿ ಆದಿನಾಥ ದೇವಾಲಯ ಎಂದು ಕರೆದಿದೆ.
14ನೇ ಶತಮಾನದಲ್ಲಿ ಇಲ್ಯಾಸ್ ಶಾಹಿ ರಾಜವಂಶದ ಎರಡನೇ ದೊರೆ ಸುಲ್ತಾನ್ ಸಿಕಂದರ್ ಷಾ ನಿರ್ಮಿಸಿರುವ ಅದೀನಾ ಮಸೀದಿಯು ಆ ಕಾಲದಲ್ಲಿ ಭಾರತದ ಅತಿದೊಡ್ಡ ಮಸೀದಿಯಾಗಿತ್ತು. ಇದು ವಾಸ್ತುಶಿಲ್ಪದ ಭವ್ಯತೆಯನ್ನು ಪ್ರದರ್ಶಿಸುತ್ತದೆ ಎಂದು ಬರೆದಿರುವ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಗುರುವಾರ ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಸ್ಮಾರಕದ ಫೋಟೋಗಳನ್ನು ಹಂಚಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಬಂಗಾಳ ಘಟಕವು ಇದು ಆದಿನಾಥ ದೇವಾಲಯ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರಿಗೆ ಅವರು ಉಲ್ಲೇಖಿಸುತ್ತಿರುವ ಸ್ಮಾರಕವು ದೇವಾಲಯದ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ತಿಳಿದಿಲ್ಲ ಎಂದು ಹೇಳಿ ವಿವಿಧ ಐತಿಹಾಸಿಕ ಉಲ್ಲೇಖಗಳನ್ನು ಬರೆದಿದ್ದಾರೆ.
ಅದೀನಾ ಮಸೀದಿಯೊಳಗೆ ಕಳೆದ ವರ್ಷ ಪುರೋಹಿತರ ಗುಂಪೊಂದು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿತ್ತು. ಇದರಲ್ಲಿ ವೃಂದಾವನದ ವಿಶ್ವವಿದ್ಯಾ ಟ್ರಸ್ಟ್‌ನ ಅಧ್ಯಕ್ಷ ಹಿರಣ್ಮಯ್ ಗೋಸ್ವಾಮಿ ಕೂಡ ಇದ್ದರು. ಇವರು ಮಸೀದಿಯಲ್ಲಿದ್ದ ಹಿಂದೂ ದೇವರ ವಿಗ್ರಹಗಳನ್ನು ಗುರುತಿಸಿ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿದ್ದರು. ಗೋಸ್ವಾಮಿ ಮತ್ತು ಇತರ ಪುರೋಹಿತರು ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಿದ ಬಲಿಕ್ ಭಾರತೀಯ ಪುರಾತತ್ವ ಸಮೀಕ್ಷೆ (ASI) ಅವರ ವಿರುದ್ಧ ಪ್ರಕರಣ ದಾಖಲಿಸಿತು.
ಅನಂತರ ಈ ಮಸೀದಿಯನ್ನು ದೇಶದ ಅತ್ಯಂತ ಮಹತ್ವದ ಸ್ಮಾರಕ ಎಂದು ಗುರುತಿಸಿ ಮಸೀದಿಯನ್ನು ಮುಚ್ಚಲಾಯಿತು. ಸುರಕ್ಷತೆಗಾಗಿ ಸಿಸಿಟಿವಿ ಕಣ್ಗಾವಲನ್ನು ಇರಿಸಲಾಯಿತು. ಹತ್ತಿರದಲ್ಲೇ ಪೊಲೀಸ್ ಚೆಕ್‌ಪೋಸ್ಟ್ ಅನ್ನು ಕೂಡ ಸ್ಥಾಪಿಸಲಾಗಿದೆ. ಈ ಮಸೀದಿಯನ್ನು ಬಂಗಾಳ ಸುಲ್ತಾನರ ಇಲ್ಯಾಸ್ ರಾಜವಂಶದ ಎರಡನೇ ಆಡಳಿತಗಾರ ಸಿಕಂದರ್ ಷಾ ನಿರ್ಮಿಸಿದ್ದು, ಇದರೊಳಗೆ ಅವರ ಸಮಾಧಿ ಕೂಡ ಇದೆ.








