ಬೆಂಗಳೂರು:
ಫೆ 16: ಈಗ ನಡೆಯುತ್ತಿರುವ ಕರ್ನಾಟಕದ ವಿಧಾನ ಮಂಡಲದ ಬಜೆಟ್ ಅಧಿವೇಶನ ಅಕ್ಷರಶಃ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೀಳು ಮಟ್ಟದ ವಾಗ್ಯುದ್ದಕ್ಕೆ ಕಾರಣವಾಗಿದೆ. ಸದನದಲ್ಲಿ ಪ್ರಯೋಗವಾಗುತ್ತಿರುವ ಭಾಷೆಗಳನ್ನು ಕೇಳಿ, “ನೀವೆಲ್ಲಾ ಸೀನಿಯರ್ ಸದಸ್ಯರಾ”ಎಂದು ಖುದ್ದು ಸ್ಪೀಕರ್ ಕಾಗೇರಿಯವರೇ ಪ್ರಶ್ನಿಸಿದ್ದಾರೆ.
ಆವಾಗಾವಗ ನಾಲಿಗೆಯ ಮೇಲೆ ಹಿಡಿತ ತಪ್ಪುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕೆಲವು ದಿನಗಳ ಕೆಳಗೆ, ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ, ಒಂದಲ್ಲಾ ಒಂದು ದಿನ ಕೇಸರಿ ಧ್ವಜ ಹಾರಬಹುದು ಹೇಳಿದ್ದರು.
ಈ ವಿಚಾರವನ್ನು ಸದನದಲ್ಲಿ ಮೊದಲು ಪ್ರಸ್ತಾವಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, “ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜ ಬಿಟ್ಟು ಬೇರೆ ಧ್ವಜ ಹಾರಿಸಲು ಸಾಧ್ಯವಾ? ಅದು ನಮ್ಮ ಹೆಮ್ಮೆಯ ದ್ಯೋತಕ, ರಾಷ್ಟ್ರಧ್ವಜದ ಬಗ್ಗೆ ಕೀಳಾಗಿ ಮಾತನಾಡಿದರೆ ಕಾನೂನು ಪ್ರಕಾರ ತಪ್ಪು. ಈಶ್ವರಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳಲಿ” ಎಂದು ಸದನದಲ್ಲಿ ಆಗ್ರಹಿಸಿದರು.
ಆಗ ಮಾತನಾಡಲು ಎದ್ದು ನಿಂತ ಡಿ.ಕೆ.ಶಿವಕುಮಾರ್ ಅವರನ್ನು ತಡೆದ ಸ್ಪೀಕರ್ ಕಾಗೇರಿ, “ಈ ವಿಚಾರದ ಮೇಲೆ ಮಾತನಾಡಲು ಮೊದಲು ನನಗೆ ಮನವರಿಕೆಯಾಗಬೇಕು, ಇದು ಉತ್ತರ ಕೊಡುವ ವಿಚಾರವಲ್ಲ. ಈಶ್ವರಪ್ಪನವರು ಈ ಸದನದ ಹಿರಿಯ ಸದಸ್ಯರು, ಅವರ ಮಾತನ್ನು ಮೊದಲು ಕೇಳೋಣ” ಎಂದು ಕಾಗೇರಿಯವರು ಹೇಳಿದರು.
“ದೇಶದ್ರೋಹದ ಬಗ್ಗೆ ಮಾತನಾಡಿದವರ ಮಾತನ್ನು ಏನು ಸರ್ ಕೇಳುವುದು, ಲೇ ಈಶ್ವರಪ್ಪ ನೀನೊಬ್ಬ ದೇಶದ್ರೋಹಿ” ಎಂದು ಈಶ್ವರಪ್ಪನವರಿಗೆ ಕೈ ತೋರಿಸಿ ತರಾಟೆಗೆ ತೆಗೆದುಕೊಂಡರು. ಆಗ ಸಿಟ್ಟಾದ ಈಶ್ವರಪ್ಪ, “ದೇಶದ್ರೋಹಿ ನಾನಲ್ವೋ, ನಿಮ್ಮಪ್ಪ..ನಿಮ್ ತಾತ, ನೀನಿನ್ನೂ ಬೇಲ್ ನಲ್ಲಿ ಇದ್ದೀಯಾ.. ನೆನಪಿರಲಿ” ಎಂದು ತಿರುಗೇಟು ನೀಡಿದರು.
“ಅವನಿನ್ನೂ ಬೇಲ್ ನಲ್ಲಿ ಇದ್ದಾನೆ, ಜೈಲಿಗೆ ಹೋಗಿ ಬಂದಿದ್ದಾನೆ, ರಾಷ್ಟ್ರ ದ್ರೋಹಿ ಎಂದು ನನಗೆ ಹೇಳುತ್ತಾನೆ. ದೇಶದ ದೊಡ್ಡ ಲೂಟಿಕೋರ, ಯಾವಾಗ ಜೈಲಿಗೆ ಹೋಗುತ್ತಾನೆ ಎನ್ನುವುದು ಗೊತ್ತಿಲ್ಲ”ಎಂದು ಈಶ್ವರಪ್ಪ, ಡಿಕೆಶಿ ವಿರುದ್ದ ಗುಡುಗಿದರು. ಹತ್ತು ನಿಮಿಷ, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ಎಷ್ಟಿತ್ತೆಂದರೆ ಯಾರ ಮಾತು ಯಾರಿಗೂ ಕೇಳಿಸುತ್ತಿರಲಿಲ್ಲ.
ಈಶ್ವರಪ್ಪನವರ ಹೇಳಿಕೆಗೆ ಸಿಟ್ಟಾದ ಕಾಂಗ್ರೆಸ್ ಸದಸ್ಯರು ಬಾವಿಗೆ ಬಂದು ಪ್ರತಿಭಟನೆಗೆ ಇಳಿದರು. ನೀವೆಲ್ಲಾ ಸೀನಿಯರ್ಸಾ ಎಂದು ಬೇಸರ ವ್ಯಕ್ತ ಪಡಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸದನವನ್ನು ಮುಂದೂಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ