ಪ್ರಜಾಪ್ರಗತಿ-ಪ್ರಗತಿ ವಾಹಿನಿಯಿಂದ ರಾಷ್ಟ್ರೀಯ ರೈತ ದಿನಾಚರಣೆ ಪ್ರಯುಕ್ತ ವಿಶೇಷ ಸಂವಾದ
ತುಮಕೂರು:
ಕೇಂದ್ರ ಸರಕಾರದಿಂದ ಜಾರಿಗೊಳಿಸಲಾಗಿರುವ ಮೂರು ಕೃಷಿ ಸಂಬಂಧಿ ಕಾಯ್ದೆಗಳ ವಿರುದ್ಧ ರಾಜಧಾನಿ ದೆಹಲಿಯಲ್ಲಿ ರೈತರ ಆಕ್ರೋಶ ಬುಗಿಲೆದ್ದಿದ್ದು, ಕಾಯ್ದೆಗಳ ಬಗೆಗೆ ರೈತರಲ್ಲಿರುವ ಗೊಂದಲ, ಸಮಸ್ಯೆ ನಿವಾರಿಸಲು ಪ್ರಧಾನಿಯವರೇ ಖುದ್ದು ರೈತರೊಡನೆ ಮಾತುಕತೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಪ್ರಜಾಪ್ರಗತಿ, ಪ್ರಗತಿ ವಾಹಿನಿಯಿಂದ ರಾಷ್ಟ್ರೀಯ ರೈತ ದಿನಾಚರಣೆ ಪ್ರಯುಕ್ತ ಬುಧವಾರ ನಡೆದ ರೈತ ಸಂವಾದದಲ್ಲಿ ವ್ಯಕ್ತವಾಯಿತು.
ಸಂವಾದದಲ್ಲಿ ಮಾತನಾಡಿದ ಕೃಷಿ ಖಾತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಕೇಂದ್ರ ಸರಕಾರ ಕೋವಿಡ್ ಕಾಲಘಟ್ಟದಲ್ಲಿ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಮಸೂದೆ, ಅಗತ್ಯ ಸರಕು ಸೇವೆಗಳ ಒಪ್ಪಂದದ ಮಸೂದೆಯನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸಲು ರಾಜ್ಯಗಳ ಮೇಲೆ ಒತ್ತಡ ಹೇರಿತು. ನಂತರ ಇದು ಕಾಯ್ದೆಗಳಾಗಿ ಅನುಷ್ಟಾನಗೊಳಿಸಲಾಗಿದೆ. ಸಂಸತ್ನಲ್ಲಿ ಚರ್ಚೆಯ ಮೂಲಕವೇ ಅಂಗೀಕಾರ ಪಡೆದು ಕಾಯ್ದೆ ಜಾರಿಗೊಳಿಸಬಹುದಾಗಿತ್ತು. ಕೃಷಿ ಕಾಯ್ದೆಗಳು ದೇಶದ ಬಹುಸಂಖ್ಯಾತ ರೈತರ ಮೇಲೆ ಪರಿಣಾಮ ಬೀರುವಂತಹವು. ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಕಾಯ್ದೆ ಜಾರಿಗೊಳಿಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ಕಾರ್ಪೋರೇಟ್ ಸಂಸ್ಥೆಗಳಿಗೆ ಸೆಸ್ ಉಳಿಸಿಕೊಡಲು ಯತ್ನ:
ಈ ಕೃಷಿ ಕಾಯ್ದೆಗಳ ಜಾರಿಯಿಂದ ಅಪೌಷ್ಠಿಕತೆಯಿಂದ ದೇಶದ ಮಕ್ಕಳು ಮತ್ತಷ್ಟು ಬಳಲುವಂತಾಗುತ್ತದೆ. ಸಿರಿಧಾನ್ಯಗಳ ಬೆಳೆಯುವುದೇ ಸ್ಥಗಿತವಾಗಲಿದೆ. ಪ್ರಧಾನಿಯವರು ನೀಡಿದ ಭರವಸೆಯಂತೆ 2 ಲಕ್ಷ ಉದ್ಯೋಗವನ್ನೇ ಸೃಷ್ಟಿಸದೆ ಕೃಷಿಯೇತರ ವಲಯದ ಆದಾಯ ಹೆಚ್ಚುತ್ತದೆ ಎನ್ನುವುದು ಹಸಿ ಸುಳ್ಳು. ಎಪಿಎಂಸಿಗಳಿಂದ 681 ಕೋಟಿ ಆದಾಯ ಸರಕಾರಕ್ಕೆ ಬರುತ್ತಿದ್ದು, ಒಂದೂವರೆ ಪರ್ಸೆಂಟ್ ಸೆಸ್ ಅನ್ನು ಕಾರ್ಪೋರೇಟ್ ವಲಯಕ್ಕೆ ಉಳಿಸಿಕೊಡಲು ಈ ಕಾಯಿದೆದೆ ಜಾರಿಗೊಳಿಸಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆ ನಿಲ್ಲುವುದಿಲ್ಲ ಎನ್ನುತ್ತಾರಾದರೂ ಅದನ್ನು ಕಾಯ್ದೆಗಳಲ್ಲಿ ಅಡಕಮಾಡಲು ಮಾಡಲು ತಯಾರಿಲ್ಲ. ಎಪಿಎಂಸಿ ಹೊರತಾಗಿ ಖರೀದಿಗೆ ಅವಕಾಶವಿದೆ ಎನ್ನುವವರು ಎಪಿಎಂಸಿಯೊಳಗೆ ಕಂಪನಿಗಳಿಗೆ ಖರೀದಿಗೆ ಅವಕಾಶ ಮಾಡಿಕೊಡಬಾರದೇಕೆ? ರೈತರಿಗೆ ಹಣ ಪಾವತಿಯಲ್ಲಿ ವ್ಯತ್ಯಾಸವಾದರೆ ಎಪಿಎಂಸಿ ಆಡಳಿತ ಮಂಡಳಿ ತೀರ್ಮಾನ ಮಾಡುತ್ತಿತ್ತು. ಈಗ ಎಸಿ, ಡಿಸಿ ಮೊರೆಹೋಗಬೇಕಾಗಿದೆ. ಇಂತಹ ಕ್ಲಿಷ್ಟದಾಯಕ ಕಾನೂನಿನ ಸುಳಿಯಲ್ಲಿ ರೈತರನ್ನು ಸಿಲುಕಿಸಬೇಕೇ? ಕಾರ್ಪೋರೇಟ್ ಸಂಸ್ಥೆಗಳನ್ನು ಮಾರುಕಟ್ಟೆಯನ್ನು ತನ್ನ ಸ್ವಾಧೀನಪಡಿಸಿಕೊಳ್ಳುವ ಸನ್ನಿವೇಶ ಕಾಯ್ದೆಯಿಂದ ಸೃಷ್ಟಿಯಾಗಲಿದೆ ಎಂದು ಹೇಳಿದರು.
ರೈತಸ್ನೇಹಿ ಕೃಷಿ ಕಾಯ್ದೆಗಳ ವಿರೋಧದ ಹಿಂದೆ ಮೋದಿ ಟಾರ್ಗೆಟ್ !
ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತ ಸ್ನೇಹಿಯಾಗಿದ್ದು, ರೈತರಿಗೆ ಮಾರಾಟದ ಮುಕ್ತ ಸ್ವಾತಂತ್ರ್ಯವನ್ನು ನೀಡಲಾಗಿದೆ.
ಮಧ್ಯವರ್ತಿಗಳನ್ನು ತಪ್ಪಿಸುವ ಅವಕಾಶವಿರುವ ಈ ಕಾಯ್ದೆಗಳವಿರೋಧದ ಹಿಂದೆ ವಿಪಕ್ಷಗಳು, ಎಡಚಿಂತಕರದೊಡ್ಡ ಷಡ್ಯಂತ್ರವಿದ್ದು, ಪ್ರಧಾನಿ ಮೋದಿಯವರನ್ನೇ ಟಾರ್ಗೆಟ್ ಮಾಡಿ ರೈತ ಸಂಘಟನೆ ಹೆಸರಲ್ಲಿ ಪಟ್ಟಭದ್ರರಾಗಿರುವವರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ದೂರಿದರು.
ಹಿಂದಿನ ಸರಕಾರಗಳಲ್ಲಿ ರೈತರಿಗೆ ಆಗದಂತಹ ಅನುಕೂಲ, ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಅವಧಿಯಲ್ಲಿ ಜಾರಿಗೊಳಿಸಲಾಗಿದೆ. ಹತ್ತು ಸಾವಿರ ನೇರ ಖಾತೆಗೆ ಜಮೆ ಕಿಸಾನ್ ಸಮ್ಮಾನ್ ಯೋಜನೆ, ತೊಗರಿ, ಭತ್ತ, ಜೋಳ, ಗೋದಿ, ಹೆಸರುಕಾಳು ಸೇರಿದಂತೆ ರೈತರು ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಶೇ.20 ರಿಂದ 50ರವರೆಗೆ ಹೆಚ್ಚಳವಾಗಿರುವುದೇ ನಿದರ್ಶನ.
ರೈತರಿಂದ ಹತ್ತು ರೂ. ಕೆಜಿಗೆ ಟೊಮೇಟೊ ಖರೀದಿಸಿ ಮಾರುಕಟ್ಟೆಯಲ್ಲಿ 30-40ರೂ.ಗೆ ಮಾರುತ್ತಿದ್ದುದನ್ನು ತಪ್ಪಿಸಿ, ರೈತರಿಂದಲೇ 30ರೂ.ಗೆ ಖರೀದಿಸಿದರೆ ಆ ಆದಾಯ ಪೂರ್ಣ ರೈತನಿಗೆ ದೊರೆಯಲೆಂಬುದು ಈ ಕಾಯ್ದೆಗಳ ಜಾರಿ ಉದ್ದೇಶ. ಎಪಿಎಂಸಿ ವ್ಯವಸ್ಥೆಗೆ ಯಾವುದೇ ದಕ್ಕೆಯಾಗುವುದಿಲ್ಲ. ಅಂಬಾನಿ, ಅದಾನಿ, ಫ್ಲಿಪ್ಕಾರ್ಟ್ ಮುಂತಾದ ಕಂಪನಿಗಳು ಎನ್ಡಿಎ ಸರಕಾರದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದಲ್ಲ. ಯುಪಿಎ ಸರಕಾರದಲ್ಲೂ ಇದ್ದವೂ. ಖಾಸಗೀಕರಣ ಮಾಡಲಾಗುತ್ತಿದೆ ಎಂದು ಹಸಿಸುಳ್ಳು ಹೇಳಲಾಗುತ್ತಿದೆ. 130 ಕೋಟಿ ಮೀರಿದ ಜನಸಂಖ್ಯೆಯುಳ್ಳ ದೇಶಕ್ಕೆ ಸರಕಾರಿ, ಖಾಸಗಿ ವಲಯಗಳೆರೆಡು ಅವಶ್ಯಕ. 40 ಕಂಪನಿಗಳು ಯುಪಿಎ ಸರಕಾರದ ಅವಧಿಯಲ್ಲಿ ನೋಂದಣಿಯಾಗಿದ್ದವು. ಅಗತ್ಯ ಸರಕು ಸೇವಾ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಘೋಷಣೆ ಮಾಡಿತ್ತು. ಅದನ್ನು ನಾವು ಜಾರಿಗೊಳಿಸಿದ್ದವೆ. ವಿಪಕ್ಷಗಳು ವಿರೋಧಮಾಡದೆ ವಿಷಯಾಧಾರಿತವಾಗಿ ವಿರೋಧ ಮಾಡುವುದನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದರು.
ರೈತರೊಡನೆ ಚರ್ಚೆ ಮುಖ್ಯವೋ? ಅಂಬಾನಿ ಮೊಮ್ಮಗನನ್ನು ನೋಡುವುದು ಮುಖ್ಯವೋ?: ಜಯಚಂದ್ರ
ಕಾಯ್ದೆ ವಿರೋಧಿಸಿ ಸದ್ಯ ರಾಜಧಾನಿ ದೆಹಲಿಯಲ್ಲಿ ರೈತರು ಚಳಿಯಲ್ಲಿ ಪ್ರಾಣತೆತ್ತು ಪ್ರತಿಭಟಿಸುತ್ತಿದ್ದಾರೆ. ಸಚಿವರ ಮಾತಿಗೆ ರೈತರು ಸಮಾಧಾನಗೊಳ್ಳದಿರುವಾಗ ಕಾಯ್ದೆ ತಾತ್ಕಾಲಿಕವಾಗಿ ಹಿಂಪಡೆದು ಪ್ರಧಾನಿಯವರೇ ಖುದ್ದು ರೈತ ಪ್ರಮುಖರೊಡನೆ ಸಮಾಲೋಚಿಸಿ ಕಾಯಿದೆಗಳ ಕುರಿತು ಗೊಂದಲ ನಿವಾರಿಸಬೇಕು. ಇದನ್ನು ಬಿಟ್ಟು ಗುರುದ್ವಾರಕ್ಕೆ ತೆರಳಿ ನಮಿಸುವುದು, ಅಂಬಾನಿ ಮೊಮ್ಮಗನನ್ನು ನೋಡಲು ಹೋಗುವುದೇ ಪ್ರಧಾನಿಗೆ ಮುಖ್ಯವಾಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಟೀಕಿಸಿದರು.
ಚರ್ಚಿಸದೆ ಕಾಯ್ದೆ ಜಾರಿಯಾಗಿಲ್ಲ, ಕಾಂಗ್ರೆಸ್ ಮುಖ್ಯಮಂತ್ರಿಯೂ ಒಪ್ಪಿದ್ದರು: ಎನ್.ರವಿಕುಮಾರ್
ಏಕಾಏಕಿ ಈ ಕೃಷಿ ಕಾಯ್ದೆಗಳು ಜಾರಿಯಾಗಿಲ್ಲ. ಪಂಜಾಬ್ನ ಕಾಂಗ್ರೆಸ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಪಂಥ್ಸೇರಿ 8 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡು ಉನ್ನತಾಧಿಕಾರ ಸಮಿತಿ ಸಭೆಯಲ್ಲಿ 2018ರಲ್ಲಿ ವಿಸ್ತøತ ಚರ್ಚೆ ನಡೆದಿತ್ತು. ಕಾಂಗ್ರೆಸ್ ಮುಖ್ಯಮಂತ್ರಿಯೂ ಸಮ್ಮತಿಸಿದ್ದರು. ರೈತ ಸ್ನೇಹಿಯಾದ ಈ ಕಾಯ್ದೆಗಳನ್ನು ಕೇವಲ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು, ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ವಿರೋಧಿಸಿ ರೈತರನ್ನು ದಿಕ್ಕುತಪ್ಪಿಸಲಾಗುತ್ತಿದೆ ಎಂದು ಎಂಎಲ್ಸಿ ಎನ್.ರವಿಕುಮಾರ್ ನುಡಿದರು.
ಕಾಯ್ದೆ ವಿರೋಧಿಸಿ 33 ರೈತರ ಬಲಿದಾನ ರಾಜಕೀಯ ಪ್ರೇರಿತವೇ? : ಎ.ಗೋವಿಂದರಾಜು
ರೈತ ಸಂಘದ ಜಿಲ್ಲಾಧ್ಯಕ್ಷ ಅಳಿಲುಘಟ್ಟ ಗೋವಿಂದರಾಜು ಮಾತನಾಡಿ ಕಾಯ್ದೆಗಳನ್ನು ರಾಜಕೀಯ ಪ್ರೇರಿತವಾಗಿ ರೈತ ಸಂಘಗಳು ವಿರೋಧಿಸುತ್ತಿಲ್ಲ. ಪ್ರತಿಭಟನೆ ಕೂತವರಲ್ಲಿ 33ರೈತರು ಪ್ರಾಣತೆತ್ತಿರುವುದು ಹಗುರುವಾದ ವಿಷಯವೇ? ಪ್ರಧಾನಿಯವರಾಗಲೀ, ಸಚಿವರಾಗಲೀ ಚಳಿಯಲ್ಲಿ ದಿನಗಟ್ಟಲೇ ಕೂರಲಿ ನೋಡೋಣ. ದೇಶದ 500 ಸಂಘಟನೆಗಳು ಒಕ್ಕೊರಲಿನಿಂದ ಕಾಯ್ದೆ ವಿರೋಧಿಸುತ್ತಿದ್ದು, ಸಂಬಂಧಪಟ್ಟ ಪ್ರತಿಭಟನಾ ನಿರತರೊಡನೆ ಸಕಾರಾತ್ಮಕ ಮಾತುಕತೆಗೆ ಪ್ರಧಾನಿಯವರು ತಯಾರಿಲ್ಲ. ಎಪಿಎಂಸಿ ಹೊರಗಡೆ ಖರೀದಿಗೆ ಅವಕಾಶದಿಂದ ಸ್ಪರ್ಧಾತ್ಮಕ ಬೆಲೆ ದೊರೆಯುತ್ತದೆ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ರೈತ ಖಾಸಗಿಯವರಿಂದ ಮತ್ತಷ್ಟು ಶೋಷಣೆಗೊಳಗಾಗುತ್ತಾನೆ. ಎಪಿಎಂಸಿ ವ್ಯವಸ್ಥೆ ಸಹಜವಾಗಿಯೇ ಬಲಹೀನಗೊಳ್ಳುತ್ತದೆ. ರೈತರು ಕೂಲಿ ಕಾರ್ಮಿಕರು, ಹಮಾಲಿಗಳು ಎಲ್ಲರಿಗೂ ಸಂಕಷ್ಟ ಉಂಟಾಗುತ್ತದೆ. ಪ್ರತಿಷ್ಠೆಗಳನ್ನು ಬಿಟ್ಟು ಬಹುಸಂಖ್ಯಾರ ರೈತರ ಮಾತಿಗೆ ಮನ್ನಣೆ ಕೊಡುವುದನ್ನು ಕೇಂದ್ರ ಸರಕಾರ ಮಾಡಬೇಕು. ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸ್ವಾಮಿನಾಥನ್ ವರದಿ ಜಾರಿಗೊಳಿಸಿ:
ಈಗಾಗಲೇ ಖಾಸಗೀಕರಣ, ಜಾಗತೀಕರಣ ಪ್ರಭಾವದಿಂದ 4 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಕಿಸಾನ್ ಸಮ್ಮಾನ್ ಯೋಜನೆಯ ಪುಡಿಗಾಸು ರೈತರಿಗೆ ಬೇಡ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಒದಗಿಸುವ ಸ್ವಾಮಿನಾಥನ್ ವರದಿ ಜಾರಿಗೊಳಿಸಿ. ಸಕಾಲಕ್ಕೆ ಖರೀದಿ ಕೇಂದ್ರ ತೆರೆದು ರೈತರ ಉತ್ಪನ್ನಗಳನ್ನು ಬೆಂಬಲ ಬೆಲೆಗೆ ಖರೀದಿಸಲಿ ಎಂದು ಆಗ್ರಹಿಸಿದರು.
ಕಂಪನಿ ಗುತ್ತಿಗೆ ಕೃಷಿಯಿಂದ ಸಾಮಾನ್ಯ ರೈತರಿಗೆ ಸಂಕಷ್ಟ: ಕೆ.ಎಂ.ತಿಮ್ಮರಾಯಪ್ಪ
ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಮಸೂದೆಗಳು ರೈತರ ಬದುಕಿಗೆ ಮಾರಕವಾಗಿರುವ ಕಂಪನಿ ಗುತ್ತಿಗೆ ಕೃಷಿಯಂತಹ ಅಂಶಗಳನ್ನು ಒಳಗೊಂಡಿವೆ. ಇದರಿಂದ ಕಡಿಮೆ ಹಿಡುವಳಿ ಹೊಂದಿರುವ ಬಹುಸಂಖ್ಯಾತ ರೈತರು ಸಂಕಷ್ಟಕ್ಕೊಳಗಾಗುತ್ತಾರೆ ಎಂದು ಪಾವಗಡದ ಜೆಡಿಎಸ್ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಳವಳ ವ್ಯಕ್ತಪಡಿಸಿದರು.
ಸಣ್ಣ ಹಿಡುವಳಿದಾರರ ಜಮೀನನ್ನು ಕಂಪನಿಗಳು ಗುತ್ತಿಗೆ ಪಡೆದು ಸಾಮುದಾಯಿಕ ಕೃಷಿ ಮಾಡಿದರೆ ಮುಂದೆ ರೈತ ತನ್ನದೇ ಕೂಲಿ ಕಾರ್ಮಿಕನಾಗಿ ದುಡಿಯಬೇಕಾಗುತ್ತದೆ. ಇಂತಹ ಕಾನೂನನ್ನು ಜಾರಿಗೆ ತರುವ ಬದಲು ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಸರಕಾರದಲ್ಲಿ ಜಾರಿಗೊಳಿಸಿದಂತಹ ಸಾಲಮನ್ನಾದಂತಹ ಯೋಜನೆಯನ್ನು ಜಾರಿಗೊಳಿಸಲಿ. ಆಗ ರೈತ ಋಣಮುಕ್ತನಾಗಿ ಮತ್ತೆ ಕೃಷಿಯಲ್ಲಿ ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ ಎಂದರು.
ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಮತ್ತುರಾಜ್ಯ ಸರಕಾರ ನೀಡುತ್ತಿರುವ ಪ್ರೋತ್ಸಾಹ ಧನ ರೈತನಿಗೆ ಸಾಲದಾಗಿದೆ. ಗ್ರಾಮೀಣ ಮೂಲ ಸೌಕರ್ಯ, ನೀರಾವರಿ ಯೋಜನೆಯನ್ನು ಜಾರಿಗೊಳಿಸಲಿ ಎಂದು ಸಲಹೆ ನೀಡಿ ಇರುವ ಕೃಷಿ ಮಾರಾಟ ವ್ಯವಸ್ಥೆಯನ್ನು ಬಲಪಡಿಸಿ ರೈತರಿಗೆ ಅನುಕೂಲವಾಗುವಂತಹ ಕಾಯ್ದೆ ರೂಪಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ