ಅಗ್ರಿಲೀಫ್ ಗೆ ಹರಿದು ಬಂದ ಬಂಡವಾಳ -ದಾಖಲೆಯ 16 ಕೋಟಿ ರೂ ಹೂಡಿಕೆ!

ಮಂಗಳೂರು :

   ಹಾಳೆತಟ್ಟೆ ಉತ್ಪಾದನೆ ಮತ್ತು ರಫ್ತು ಚಟುವಟಿಕೆಯಲ್ಲಿ ದೇಶದ ನಂ.1 ಸಂಸ್ಥೆಯಾಗಿರುವ “ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್”ನ ಅಭಿವೃದ್ಧಿ ಹಾಗೂ ವಿಶ್ವಾಸಾರ್ಹತೆ ಪರಿಗಣಿಸಿ ಕ್ಯಾಪಿಟಲ್-ಎ ಮತ್ತು ಸಮರ್ಷ್ ಕ್ಯಾಪಿಟಲ್ ಎಂಬ ಎರಡು ಬಂಡವಾಳ ಹೂಡಿಕೆ ಸಂಸ್ಥೆಗಳು ದಾಖಲೆಯ ರೂ. 16 ಕೋಟಿ ಹಣವನ್ನು ಹೂಡಿಕೆ ಮಾಡಿವೆ.

    ಇದು ಅಗ್ರಿಲೀಫ್ ಸಂಸ್ಥೆಯ ಹೊಸ ಮೈಲಿಗಲ್ಲಾಗಿದ್ದು, ಅಮೆರಿಕ, ಯೂರೋಪ್, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳತ್ತ ಸಂಸ್ಥೆಯ ವಿಸ್ತರಣಾ ಯೋಜನೆಗಳಿಗೆ ಸಹಕಾರಿಯಾಗುವ ಜತೆಗೆ ಅಲ್ಲಿ ಸ್ಥಾಪಿತ ಮಾರುಕಟ್ಟೆಯನ್ನು ಹೊಂದಲು ನೆರವಾಗಲಿದೆ. ಅಡಿಕೆ ಹಾಳೆತಟ್ಟೆ ರಫ್ತು ಸಂಸ್ಥೆಯೊಂದಕ್ಕೆ ಈ ಪ್ರಮಾಣದ ಹೂಡಿಕೆ ಹರಿದುಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲು ಎನ್ನುವುದು ಗಮನಾರ್ಹ. ಶಾಜಿ ದೇವೆಕರ್ ಸೇರಿದಂತೆ ಏಂಜೆಲ್ ಹೂಡಿಕೆದಾರರು ಭಾಗವಹಿಸಿದ್ದರು. ದಿ ನಟ್‌ಕ್ರಾಕರ್‌ನ ಸಹ-ಸಂಸ್ಥಾಪಕ- ಸಿದ್ಧಾರ್ಥ್ ಬಫ್ನಾ, ವೇದ್ ಪ್ರಕಾಶ್ , ಬ್ಲಿಂಗ್ ಮಶ್ರೂಮ್‌ನ ಪ್ರಿತಿ ಜೈನ್, ವೇರಿಯೊ ಲೌಂಜ್‌ನ ನಿರ್ದೇಶಕ ಸುಮೀತ್ ಭಲೋಟಿಯಾ, ಮ್ಯಾಚ್‌ಲಾಗ್ ಸಂಸ್ಥಾಪಕ ಧ್ರುವ್ ತನೇಜಾ, ಮತ್ತು ಬೀಟಾ ಪ್ಲಸ್ ಚಿರಂತ್ ಪಾಟೀಲ್ ಪಾಲ್ಗೊಂಡಿದ್ದರುಪ.

    ಈ ಬಗ್ಗೆ ಮಂಗಳೂರಿನಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಸಂಸ್ಥೆಯ ಸಂಸ್ಥಾಪಕರು (ಸಿಇಒ) ಅವಿನಾಶ್ ರಾವ್, ಹೊಸ ಹೂಡಿಕೆಗಳ ಮೂಲಕ ಅಗ್ರಿಲೀಫ್ ಸಂಸ್ಥೆ ತನ್ನ ಜಾಗತಿಕ ಗುರುತನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಪ್ರಮಾಣ ಹಿಗ್ಗಿಸುವ ಜತೆಗೆ ಹವಾಮಾನ ಬದಲಾವಣೆಯ ಸವಾಲಿನ ಸನ್ನಿವೇಶದಲ್ಲಿ ಪರಿಸರ ಸ್ನೇಹಿ ಹಾಳೆತಟ್ಟೆ ಹಾಗೂ ಇತರೆ ಕೃಷಿ ಉತ್ಪನ್ನಗಳ ಉದ್ಯಮದಲ್ಲಿ ದಾಪುಗಾಲಿಡುತ್ತಿದೆ. ಮುಂದಿನ 2 ವರ್ಷಗಳಲ್ಲಿ ರೂ. 100 ಕೋಟಿ ವ್ಯವಹಾರ ನಡೆಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

   ನವೀನ ಆವಿಷ್ಕಾರಗಳೊಂದಿಗೆ ಗ್ರಾಮೀಣ ಭಾಗದಲ್ಲಿ ಛಾಪು ಮೂಡಿಸುತ್ತಿರುವ ಅಗ್ರಿಲೀಫ್ ಸಂಸ್ಥೆ, ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿರುವುದು ಹೂಡಿಕೆದಾರರ ಆಕರ್ಷಣೆಗೆ ಪಾತ್ರವಾಗಿದೆ. ಹೊಸ ಹೊಸ ಉತ್ಪನ್ನಗಳ ಮೂಲಕ ಕೃಷಿಕರನ್ನು ಮತ್ತಷ್ಟು ಪ್ರೋತ್ಸಾಹಿಸಲಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, 2025ರಲ್ಲಿ ಅಂದಾಜು 3 ಕೋಟಿ ಹಾಳೆ ಸಂಗ್ರಹಣೆಯಾಗಲಿದ್ದು, ದಿನವೊಂದಕ್ಕೆ 3 ಲಕ್ಷ ಹಾಳೆತಟ್ಟೆಗಳನ್ನು ತಯಾರಿ ಮಾಡುವ ಗುರಿ ಇದೆ ಎಂದು ಸಂಸ್ಥೆಯ ಸಹಸಂಸ್ಥಾಪಕರಾದ ಅತಿಶಯ ಜೈನ್ ವಿವರಿಸಿದ್ದಾರೆ.

   ಮೊರ್ಡಾರ್ ಇಂಟೆಲಿಜೆನ್ಸ್ ಪ್ರಕಾರ, ಜೈವಿಕ ವಿಘಟನೀಯ ಪ್ಯಾಕೇಜಿಂಗ್‌ನ ಮಾರುಕಟ್ಟೆಯು 2029 ರ ವೇಳೆಗೆ ಸರಿಸುಮಾರು 140.66 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಅವರು 2019ರಲ್ಲಿ ಅಗ್ರಿಲೀಫ್ ಸಂಸ್ಥೆಯನ್ನು ಆರಂಭಿಸಿದರು. ಪ್ಲಾಸ್ಟಿಕ್, ಪೇಪರ್ ಪ್ಲೇಟ್ ಗಳಿಗೆ ಪರ್ಯಾಯವಾಗಿ ಹಾಳೆತಟ್ಟೆಗಳು ಶೇ.100ರಷ್ಟು ನೈಸರ್ಗಿಕವಾಗಿದೆ.

  ಗ್ರಾಮೀಣ ಭಾಗದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ರೋಬೋಟಿಕ್ಸ್​ಗಳನ್ನೊಳಗೊಂಡ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರತಿ ಉತ್ಪನ್ನದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 3 ಲಕ್ಷ ಹಾಳೆತಟ್ಟೆಯ ದೈನಂದಿನ ಉತ್ಪಾದನಾ ಗುರಿಯ ಜತೆಗೆ ಇದು ಗ್ರಾಮೀಣ ಪ್ರದೇಶದಲ್ಲಿ ಅಂದಾಜು 1,000 ಉದ್ಯೋಗ ಸೃಷ್ಟಿಸುವ ಮೂಲಕ ಸ್ಥಳೀಯ ಜನ-ಸಮುದಾಯಗಳನ್ನು ಬೆಂಬಲಿಸುತ್ತಾ ಬಂದಿದೆ.

Recent Articles

spot_img

Related Stories

Share via
Copy link