ಗಾಂಧಿನಗರ:
ಗುಜರಾತ್‌ನಲ್ಲಿ ಭೀಕರ ವಿಮಾನ ಅಪಘಾತವಾಗಿದ್ದು, ಏರ್ ಇಂಡಿಯಾ ವಿಮಾನ ಸುಮಾರು 800 ಅಡಿ ಎತ್ತರದಿಂದ ಪತನವಾಗಿದೆ . ಘಟನೆ ವೇಳೆ ಸುಮಾರು 242 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಈ ಅವಘಡ ಸಂಭವಿಸಿದೆ. ಸದ್ಯ ಅಪಘಾತದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ಸ್ಥಳದಲ್ಲಿ ದಟ್ಟ ಹೊಗೆ ಕಂಡು ಬಂದಿದೆ. ಮೂಲಗಳ ಪ್ರಕಾರ ಸುಮಾರು 40 ಮಂದಿ ಅಪಘಾತದಲ್ಲಿ ಅಸುನೀಗಿರುವ ಸಾಧ್ಯತೆ ಇದೆ.
ಅಪಘಾತ ನಡೆದ ಘಟನೆಯ ವಿಡಿಯೊ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯದಲ್ಲಿ ಏರ್ ಇಂಡಿಯಾ ವಿಮಾನವು ಗಾಳಿಯಲ್ಲಿ ನಿಯಂತ್ರಣ ಕಳೆದುಕೊಂಡು ನೆಲದ ಕಡೆಗೆ ಧಾವಿಸುತ್ತಿರುವುದು ಕಂಡುಬಂದಿದೆ. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತವಾಗಿದೆ. ಅಪಘಾತದ ನಂತರ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು, ನೆಲದಿಂದ ದಟ್ಟವಾದ ಹೊಗೆ ಮೇಲೇರಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿನಗರ ಬಳಿ ಪತನಗೊಂಡಿದ್ದು, ಆ ಪ್ರದೇಶದಲ್ಲಿ ಭೀತಿಯ ವಾತಾವರಣ ಉಂಟು ಮಾಡಿದೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಆಘಾತ ವ್ಯಕ್ತಪಡಿಸಿದ್ದಾರೆ.
“ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಎಲ್ಲ ವಿಮಾನಯಾನ ಮತ್ತು ತುರ್ತು ಪ್ರತಿಕ್ರಿಯೆ ಸಂಸ್ಥೆಗಳಿಗೆ ತ್ವರಿತ ಮತ್ತು ಸಂಘಟಿತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದೇನೆ” ಎಂದು ಅವರು ಹೇಳಿದ್ದಾರೆ. 10ಕ್ಕಿಂತ ಹೆಚ್ಚು ಅಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳಕ್ಕೆ ತೆರಳುವ ಎಲ್ಲ ರಸ್ತೆಗಳನ್ನು ಬ್ಲಾಕ್ ಮಾಡಲಾಗಿದೆ. ಏರ್ ಇಂಡಿಯಾ ವಿಮಾನ ಲಂಡನ್‌ಗೆ ತೆರಳುತ್ತಿತ್ತು.
ಈತನ್ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತನಾಡಿ ರಾಜ್ಯಕ್ಕೆ ಎಲ್ಲ ರೀತಿಯ ಸಹಾಯದ ಭರವಸೆ ನೀಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾಗಿಸಲು ಹಸಿರು ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ. “ಎಲ್ಲ ಚಿಕಿತ್ಸಾ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಖಚಿತಪಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ” ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ
