ಗುವಾಹಟಿ:
ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಬುಧವಾರ ವಿಮಾನ ಪ್ರಯಾಣದ ವೇಳೆ ತೊಂದರೆ ಉಂಟಾಗಿದೆ. ಈ ಕುರಿತು ಸಿರಾಜ್ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬುಧವಾರ ರಾತ್ರಿ ಗುವಾಹಟಿಯಿಂದ ಹೈದರಾಬಾದ್ಗೆ ಹೊರಟಿದ್ದ ಸಿರಾಜ್ ಅವರ ವಿಮಾನ ಸಂಜೆ 7:25ಕ್ಕೆ ನಿರ್ಗಮಿಸಬೇಕಿತ್ತು. ಆದರೆ ವಿಮಾನ ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ಸೂಕ್ತ ಸಮಯಕ್ಕೆ ಹಾರಲು ಸಾಧ್ಯವಾಗಲಿಲ್ಲ. ಈ ಕುರಿತು ಮಾಹಿತಿ ಕೇಳಿದರೆ ವಿಮಾನಯಾನ ಸಂಸ್ಥೆ ಸ್ಪಷ್ಟ ವಿವರಣೆ ನೀಡಿಲ್ಲ. ಇದರಿಂದಾಗಿ ಪ್ರಯಾಣಿಕರು ನಾಲ್ಕು ಗಂಟೆಗಳ ಕಾಲ ಗೊಂದಲಕ್ಕೆ ಸಿಲುಕುವಂತಾಯಿತು ಎಂದು ಟೀಮ್ ಇಂಡಿಯಾ (India) ವೇಗಿ ಆರೋಪಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿರಾಜ್, “ಗುವಾಹಟಿಯಿಂದ ಹೈದರಾಬಾದ್ಗೆ ಹೋಗುವ ಏರ್ ಇಂಡಿಯಾ ವಿಮಾನ ಸಂಖ್ಯೆ IX 2884 ಸಂಜೆ 7:25 ಕ್ಕೆ ಹೊರಡಬೇಕಿತ್ತು, ಆದರೆ ವಿಮಾನಯಾನ ಸಂಸ್ಥೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಪದೇ ಪದೇ ಕೇಳಿದ ನಂತರವೂ, ಅವರು ಯಾವುದೇ ಸರಿಯಾದ ಕಾರಣವನ್ನು ನೀಡದೆ ವಿಮಾನವನ್ನು ವಿಳಂಬ ಮಾಡಿದ್ದಾರೆ. ಇದು ಅತ್ಯಂತ ನಿರಾಶಾದಾಯಕವಾಗಿದೆ ಮತ್ತು ಇದು ಯಾವುದೇ ಪ್ರಯಾಣಿಕರ ಮೂಲ ನಿರೀಕ್ಷೆಯಾಗಿದೆ. ವಿಮಾನ ಹೊರಡುವುದು 4 ಗಂಟೆಗಳಷ್ಟು ವಿಳಂಬವಾಯಿತು. ವಿಮಾನಯಾನ ಸಂಸ್ಥೆಯ ಕೆಟ್ಟ ಅನುಭವ,” ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸಿರಾಜ್ ಅವರು ಪೋಸ್ಟ್ ಹಂಚಿಕೊಂಡ ಕೂಡಲೇ ಎಚ್ಚೆತ್ತುಕೊಂಡು ಕ್ಷಮೆಯಾಚಿಸಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್, “ಅನಿರೀಕ್ಷಿತ ಕಾರ್ಯಾಚರಣೆಯ ಕಾರಣಗಳಿಂದ ವಿಮಾನವನ್ನು ರದ್ದುಗೊಳಿಸಲಾಗಿದೆ. ತನ್ನ ವಿಮಾನ ನಿಲ್ದಾಣದ ಸಿಬ್ಬಂದಿ ಎಲ್ಲಾ ಪ್ರಯಾಣಿಕರಿಗೆ ಅಗತ್ಯ ವ್ಯವಸ್ಥೆಗಳೊಂದಿಗೆ ಸಹಾಯ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಎಷ್ಟು ಕಷ್ಟಕರವಾಗಿದೆ ಎಂದು ನಮಗೆ ಅರ್ಥವಾಗಿದೆ, ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಯನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ,” ಎಂದು ವಿಮಾನಯಾನ ಸಂಸ್ಥೆ ಬರೆದಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 408 ರನ್ಗಳ ಸೋಲು ಅನುಭವಿಸಿದ ನಂತರ ಮೊಹಮ್ಮದ್ ಸಿರಾಜ್ ಹೈದರಾಬಾದ್ಗೆ ಮರಳುತ್ತಿದ್ದರು. ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಸೋತ ನಂತರ ತವರಿನಲ್ಲಿ ಸತತ ಎರಡನೇ ವೈಟ್ವಾಶ್ ಮುಜುಗರ ಇದಾಗಿದೆ. ಈ ಫಲಿತಾಂಶವು ಭಾರತದ ಟೆಸ್ಟ್ ತಂಡದ ಮೇಲೆ ಕಳವಳವನ್ನು ತಂದಿದೆ.
ನವೆಂಬರ್ 30 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಹಿರಿಯ ವೇಗಿ ಮೊಹಮ್ಮದ್ ಸಿರಾಜ್ಗೆ ಏಕದಿನ ಸರಣಿಯಲ್ಲಿ ವಿಶ್ರಾಂತಿಯನ್ನು ನೀಡಲಾಗಿದೆ. ಏಕದಿನ ಸರಣಿಯ ಭಾರತ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ಪ್ರಸಿಧ್ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ.








