ಅನಾರೋಗ್ಯ ಕಾರಣ ಸಿಬ್ಬಂದಿ ರಜೆ : ಸಿಬ್ಬಂದಿಗೆ ಷಾಕ್‌ ನೀಡಿದ ಏರ್‌ ಇಂಡಿಯಾ

ನವದೆಹಲಿ:

    ಅನಾರೋಗ್ಯದ ಕಾರಣ ನೀಡಿ ಸಾಮೂಹಿಕ ರಜೆ ತೆಗೆದುಕೊಂಡಿದ್ದ ಸಿಬ್ಬಂದಿಗಳಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಬಿಗ್ ಶಾಕ್ ನೀಡಿದ್ದು, ಕೆಲಸದಿಂದಲೇ ವಜಾಗೊಳಿಸಿದೆ.

    ಮಂಗಳವಾರ, ಏರ್ ಇಂಡಿಯಾದ 200 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ಮೇಲೆ ರಜೆಗೆ ತೆರಳಿದ್ದರು, ಈ ಕಾರಣದಿಂದಾಗಿ ಬುಧವಾರ 70 ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಇಂದೂ ಕೂಡ (ಗುರುವಾರ) ಏರ್ ಇಂಡಿಯಾ ವಿಮಾನಗಳು ಕಡಿಮೆ ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗುತ್ತಿದೆ.

    ನೌಕರರ ರಜೆಯು ಏರ್‌ ಇಂಡಿಯಾ ಸಂಚಾರದ ಮೇಲೆ ಪರಿಣಾಮ ಬೀರಿರುವುದರಿಂದ ರಜೆಯ ಮೇಲೆ ತೆರಳಿದ್ದ ನೌಕಕರನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಜಾಗೊಳಿಸಿದೆ. ಒಟ್ಟು 35 ಮಂದಿ ನೌಕರರಿಗೆ ವಜಾ ಪತ್ರ ನೀಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

    ನೌಕರರನ್ನು ವಜಾಗೊಳಿಸಿದ ಹಿಂದಿನ ಕಾರಣವನ್ನು ಉಲ್ಲೇಖಿಸಿರುವ ವಿಮಾನಯಾನ ಸಂಸ್ಥೆಯು, ಸಂಬಂಧಪಟ್ಟ ನೌಕರರು ಯಾವುದೇ ಸರಿಯಾದ ಕಾರಣವಿಲ್ಲದೆ ಉದ್ದೇಶಪೂರ್ವಕವಾಗಿ ಕೆಲಸದಿಂದ ದೂರ ಸರಿದಿದ್ದಾರೆ. ಟೇಕಾಫ್ ಆಗುವ ಮುನ್ನವೇ ಅವರ ಕಣ್ಮರೆಯಾಗಲು ಯಾವುದೇ ಕಾರಣವಿದ್ದಂತೆ ಕಾಣುತ್ತಿಲ್ಲ. ಸಾಮೂಹಿಕ ಮಟ್ಟದಲ್ಲಿ ಅನಾರೋಗ್ಯ ರಜೆ ತೆಗೆದುಕೊಳ್ಳುವುದು ಸಹ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಏರ್ ಇಂಡಿಯಾ ಕಂಪನಿ ಹೇಳಿದೆ.

    ಇನ್ನು ಸಿಬ್ಬಂದಿಗಳಿಗೆ ಕಳುಹಿಸಿದ ವಜಾ ಪತ್ರದಲ್ಲಿ, ಯಾವುದೇ ಸಮರ್ಥನೀಯ ಕಾರಣವಿಲ್ಲದೆ ಕೆಲಸ ಮಾಡುವ ಮೊದಲು ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿರುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಉಲ್ಲೇಖಿಸಿದೆ. ಅಲ್ಲದೇ, ‘ನಿಮ್ಮ ಕಾರ್ಯವು ಸಾರ್ವಜನಿಕ ಹಿತಾಸಕ್ತಿಗಳಿಗೆ ಹಾನಿಯುಂಟುಮಾಡುವುದು ಮಾತ್ರವಲ್ಲದೆ, ಕಂಪನಿಗೆ ಮುಜುಗರ, ಗಂಭೀರ ಅಪಖ್ಯಾತಿ ಮತ್ತು ಗಂಭೀರ ವಿತ್ತೀಯ ನಷ್ಟವನ್ನು ಉಂಟುಮಾಡಿದೆ’ ಎಂದು ಹೇಳಿದೆ.

    ಈ ಬಗ್ಗೆ ಮಾತನಾಡಿರುವ ಕಂಪನಿಯ ಸಿಇಒ ಅಲೋಕ್ ಸಿಂಗ್ ಅವರು, ಸಿಬ್ಬಂದಿ ಸದಸ್ಯರ ಅಲಭ್ಯತೆಯನ್ನು ಎದುರಿಸುವುದರಿಂದ ಕಂಪನಿಯು ಮುಂದಿನ ಕೆಲವು ದಿನಗಳವರೆಗೆ ವಿಮಾನಗಳನ್ನು ಕಡಿತಗೊಳಿಸಲಿದೆ. ಸಿಬ್ಬಂದಿ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ವಿಮಾನಯಾನ ಸಂಸ್ಥೆಯು 90 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಬೇಕಾಯಿತು. ಮಂಗಳವಾರ ಸಂಜೆಯಿಂದ 100ಕ್ಕೂ ಹೆಚ್ಚು ಸಿಬ್ಬಂದಿಗಳು ತಮ್ಮ ನಿಗದಿತ ವಿಮಾನ ಕರ್ತವ್ಯಕ್ಕಿಂತ ಮುಂಚಿತವಾಗಿ ತೆರಳಿದ್ದಾರೆಂದು ತಿಳಿಸಿದ್ದಾರೆ.

     ಇದರಿಂದಾಗಿ ಮುಂದಿನ ಕೆಲವು ದಿನಗಳವರೆಗೆ ವಿಮಾನಗಳನ್ನು ಕಡಿತಗೊಳಿಸುವಂತಹ ಪರಿಸ್ಥಿತಿ ಎದುರಾಗಿದೆ. ಸಿಬ್ಬಂದಿ ಸದಸ್ಯರ ಅಲಭ್ಯತೆಯನ್ನು ಎದುರಿಸಲು ಮತ್ತು ವಿಮಾನ ವೇಳಾಪಟ್ಟಿಯನ್ನು ಸರಿಪಡಿಸಲು ನಾವು ಈ ಕ್ರಮವನ್ನು ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.