ಬೆಂಗಳೂರು:
ಏರ್ ಶೋ – 2025ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಬಾರಿಯ ಏರ್ಶೋ ಹಲವು ಕಾರಣಗಳಿಂದ ವಿಶೇಷವಾಗಿದೆ. ಬೆಂಗಳೂರಿನ ವಿಶ್ವ ವಿಖ್ಯಾತ ಏರ್ ಶೋ ಇದೇ ತಿಂಗಳು (ಫೆಬ್ರವರಿ 10ರಿಂದ 14) 10ನೇ ತಾರೀಖಿನಿಂದ ಪ್ರಾರಂಭವಾಗಲಿದೆ. ಏರೋ ಇಂಡಿಯಾ 2025ಕ್ಕೆ ದೇಶ – ವಿದೇಶದಿಂದ ಜನ ಭಾಗವಹಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವಾಲಯ ಈ ಶೋವನ್ನು ಆಯೋಜಿಸುತ್ತದೆ.
ಬಹು ಕೋಟಿಯ ಹೂಡಿಕೆ ಹಾಗೂ ಬಾನಂಗಳದಲ್ಲಿ ಚಿತ್ತಾಕರ್ಷಕ ವಿಮಾನಗಳ ಹಾರಾಟವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಏರೋ ಇಂಡಿಯಾ 2025 ನೋಡಬೇಕೆಂದರೆ ಏನು ಮಾಡಬೇಕು, ಟಿಕೆಟ್ ಬುಕ್ ಮಾಡುವುದು ಹೇಗೆ, ಟಿಕೆಟ್ ಬೆಲೆ ಎಷ್ಟು ಹಾಗೂ ಎಲ್ಲಿ ನಡೆಯಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಏರ್ ಶೋ ನಡೆಯುತ್ತದೆ. ಬೆಂಗಳೂರಿನ ಯಲಹಂಕ ವಲಯದ ಏರ್ ಪೋರ್ಸ್ ಸ್ಟೇಷನ್ ಪ್ರದೇಶದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಬೆಂಗಳೂರು ಏರ್ಶೋನ ಮೊದಲ ಮೂರು ದಿನಗಳ ಕಾಲ ಅಂದರೆ ಫೆಬ್ರವರಿ 10 ರಿಂದ 12ವರೆಗೆ ಉದ್ಯಮಿಗಳು, ವೃತ್ತಿಪರರು ಹಾಗೂ ಹೂಡಿಕೆದಾರಿಗಾಗಿ ಅವಕಾಶ ಇರಲಿದೆ. ಇನ್ನು ಕೊನೆಯ ಎರಡು ದಿನಗಳಲ್ಲಿ ಅಂದರೆ ಫೆಬ್ರವರಿ 13 ಮತ್ತು 14ರ ವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರಲಿದೆ.
ಏರೋ ಇಂಡಿಯಾ 2025 ಪ್ರದರ್ಶನ ಸಮಯದ ವಿವರ: ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಏರ್ ಶೋದಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೆ ಸುತ್ತಾಡುವುದಕ್ಕೆ ಅವಕಾಶ ಇರಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ. ಆಗ ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್ ಹಾಗೂ ಡ್ರೋನ್ಗಳು ಬಾನಂಗಳದಲ್ಲಿ ಸ್ವಚ್ಛಂದವಾಗಿ ಹಾರಾಡುವುದನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
ಏರೋ ಇಂಡಿಯಾ 2025ರ ಟಿಕೆಟ್ ಬೆಲೆ ವಿವರ: ನೀವು ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾದಲ್ಲಿ ಭಾಗವಹಿಸಬೇಕು ಎಂದು ಇಚ್ಛಿಸಿದರೆ ಈ ಟಿಕೆಟ್ ಬೆಲೆಗಳನ್ನು ನೋಡಿಕೊಳ್ಳಿ.
ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. * ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ | ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. * ವ್ಯಾಪಾರ ಪಾಸ್: ಭಾರತೀಯರಿಗೆ 5,000 ಸಾವಿರ ಹಾಗೂ ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ. ಈ ಪಾಸ್ಗಳನ್ನು ಖರೀದಿ ಮಾಡುವ ಮೂಲಕ ಏರೋ ಇಂಡಿಯಾದಲ್ಲಿ ವಿವಿಧ ಪ್ರರ್ದಶನವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅಲ್ಲದೆ ಇದರೊಂದಿಗೆ ವಿಚಾರ ಸಂಕಿರಣ ಮತ್ತು ವಾಯು ಪ್ರದರ್ಶನವನ್ನು ಸಹ ನೋಡಬಹುದಾಗಿದೆ. ಬೃಹತ್ ಹಾಗೂ ವಿಭಿನ್ನ ಶೈಲಿಯ ವಿಮಾನ ಹಾಗೂ ಹೆಲಿಕಾಪ್ಟರ್ಗಳನ್ನು ಸಹ ನೋಡಬಹುದಾಗಿದೆ.
ಬೆಂಗಳೂರು ಏರ್ ಶೋ 2025 ಟಿಕೆಟ್ ಬುಕ್ ಮಾಡುವುದು ಹೇಗೆ: ಏರ್ ಶೋ 2025ಕ್ಕೆ ಟಿಕೆಟ್ ಬುಕ್ ಮಾಡುವುದು ಹೇಗೆ ಎನ್ನುವ ವಿವರ ಇಲ್ಲಿದೆ. ಇನ್ನು ಏರೋ ಇಂಡಿಯಾ 2025ಕ್ಕೆ ನೀವು ಅತ್ಯಂತ ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. * ಮೊದಲನೆಯದಾಗಿ ನೀವು ಏರೋ ಇಂಡಿಯಾದ ಅಧಿಕೃತ ವೆಬ್ಸೈಟ್ ataeroindia.gov.in.ಗೆ ಭೇಟಿ ನೀಡಿ * ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಕಾಣಿಸುವ ಸಂದರ್ಶಕರ ನೋಂದಣಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ * ನಿಮಗೆ ಯಾವ ಮಾದರಿಯ ಪಾಸ್ ಬೇಕು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. * ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ. * ಟಿಕೆಟ್ ಮೊತ್ತವನ್ನು ಪಾವತಿ ಮಾಡಿ ಹಾಗೂ ಸಲ್ಲಿಸು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ * ಈ ಪ್ರಕ್ರಿಯೆಗಳು ಮುಗಿದ ಮೇಲೆ ನಿಮಗೆ ಏರೋ ಇಂಡಿಯಾ 2025ರ ಪಾಸ್ ಸಿಗಲಿದೆ. ಇನ್ನು ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗೆ ಅಧಿಕೃತ ಏರೋ ಇಂಡಿಯಾ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.