ಬೆಂಗಳೂರು:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಸ್ಟರ್ ಪ್ಲಾನ್ ಪ್ರಕಾರ, ಮುಂದಿನ ದಿನಗಳಲ್ಲಿ ವರ್ಷಕ್ಕೆ ಅಂದಾಜು 10 ಕೋಟಿ ಪ್ರಯಾಣಿಕರನ್ನು ನಿರ್ವಹಿಸಲು ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಮಂಡಳಿ ಇತ್ತೀಚೆಗೆ ಇದಕ್ಕೆ ಅನುಮೋದನೆ ನೀಡಿದೆ.
ಮೂಲಭೂತ ಸೌಕರ್ಯಗಳಲ್ಲಿ, ಟರ್ಮಿನಲ್‌ಗಳ ನಡುವೆ ಪ್ರಯಾಣಿಕರನ್ನು ಸಾಗಿಸಲು ಸ್ವಯಂಚಾಲಿತ ಪೀಪಲ್ ಮೂವರ್ (ರೈಲಿನಂತಹ ಕ್ಯಾಪ್ಸುಲ್) ಒಂದು ಹೊಸ ವೈಶಿಷ್ಟ್ಯವಾಗಿರುತ್ತದೆ. ಮುಂದಿನ ಐದು ವರ್ಷಗಳಲ್ಲಿ 2 ಬಿಲಿಯನ್ ಡಾಲರ್ ಅಂದಾಜು ವೆಚ್ಚದೊಂದಿಗೆ ಯೋಜನೆಯನ್ನು ಕಾರ್ಯಗತಗೊಳಿಸಬಹುದು ಎಂದು ವಿಮಾನ ನಿಲ್ದಾಣ ನಿರ್ವಾಹಕರು ತಿಳಿಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮೂರನೇ ಟರ್ಮಿನಲ್ ನ್ನು ರಚಿಸಲು ಸ್ಥಳಾವಕಾಶವನ್ನು ನಿಗದಿಪಡಿಸುವುದರ ಜೊತೆಗೆ, ಈಗಿರುವ ಎರಡು ಟರ್ಮಿನಲ್‌ಗಳ ವಿಸ್ತರಣೆ ಮಾಡಲಾಗುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮುಖ್ಯ ಕಾರ್ಯಾಚರಣೆ ಅಧಿಕಾರಿ (COO) ಸತ್ಯಕಿ ರಘುನಾಥ್ ಹೇಳುವಂತೆ, ಮಾಸ್ಟರ್ ಪ್ಲಾನ್ ನವೀಕರಣದ ಮೂಲಕ ನಮ್ಮ ಗುರಿ 10 ಕೋಟಿಗಿಂತಲೂ ಹೆಚ್ಚು ವಾರ್ಷಿಕ ಪ್ರಯಾಣಿಕರು ಮತ್ತು 1.5 ಮಿಲಿಯನ್ ಟನ್ ಸರಕುಗಳನ್ನು ನಿಭಾಯಿಸಲು ಸಾಕಷ್ಟು ಮೂಲಸೌಕರ್ಯ ಹೆಚ್ಚಿಸುವುದು ಮತ್ತು ಅದಕ್ಕಾಗಿ ಸ್ಥಳ ನಿಗದಿಪಡಿಸುವುದಾಗಿರುತ್ತದೆ ಎನ್ನುತ್ತಾರೆ.
ಮುಂದಿನ ಐದು ವರ್ಷಗಳಲ್ಲಿ 2 ಬಿಲಿಯನ್ ಡಾಲರ್‌ಗಳ ವಿಸ್ತರಣೆಯ ಪ್ರಮುಖ ಅಂಶಗಳೆಂದರೆ ಟರ್ಮಿನಲ್ 1 ನವೀಕರಣ, ಇನ್ನೂ 2 ಕೋಟಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಸ್ಥಳಾವಕಾಶ ಹೆಚ್ಚಿಸುವುದು, ಅಗತ್ಯವಿದ್ದಾಗಲೆಲ್ಲಾ ಟರ್ಮಿನಲ್ 3 ಗಾಗಿ ಜಾಗವನ್ನು ಕಾಯ್ದಿರಿಸುವುದಾಗಿದೆ. ಇದರಿಂದ ವಾರ್ಷಿಕವಾಗಿ 85 ರಿಂದ 90 ಮಿಲಿಯನ್ ಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ.
ಎರಡು ರನ್‌ವೇ ವ್ಯವಸ್ಥೆಯ ಸಾಮರ್ಥ್ಯವನ್ನು ನಿರ್ಣಯಿಸಲು ಸಮಗ್ರ ಸಂಚಾರ ಮುನ್ಸೂಚನೆಯನ್ನು ನಡೆಸಲಾಗಿದೆ ಎಂದು ಸಿಒಒ ಹೇಳುತ್ತಾರೆ. ನಾವು ವಾಯುಪ್ರದೇಶದ ಸಮಸ್ಯೆಗಳನ್ನು ಪರಿಹರಿಸಿದರೆ ಮತ್ತು ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಿದರೆ, 10 ಕೋಟಿಗಿಂತಲೂ ಹೆಚ್ಚು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವುದು ನಮ್ಮ ಗುರಿಯಾಗಿದೆ.
ಇದನ್ನು ಸಾಧಿಸಲು ಯಲಹಂಕ ವಾಯುಪಡೆ ನೆಲೆ, ಹೆಚ್ ಎಎಲ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವನ್ನು ಒಳಗೊಂಡ ಜಂಟಿ ಕಾರ್ಯ ಗುಂಪಿನಿಂದಲೂ ಸಹಯೋಗದ ಪ್ರಯತ್ನಗಳು ಬೇಕಾಗುತ್ತವೆ ಎಂದರು.
ವಿಮಾನ ನಿಲ್ದಾಣವು 8.5 ಕೋಟಿ ವಾರ್ಷಿಕ ಪ್ರಯಾಣಿಕರನ್ನು ಮೀರಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದರೆ, ಟರ್ಮಿನಲ್ 3 ಗಾಗಿ ಸ್ಥಳವನ್ನು ಪೂರ್ವ ಭಾಗದಲ್ಲಿ ಮೀಸಲಿಡಲಾಗುತ್ತದೆ. ಪೀಪಲ್ ಮೂವರ್ ಮೂರು ಟರ್ಮಿನಲ್‌ಗಳ ನಡುವೆ ಸುಗಮ ಪರಿವರ್ತನೆಯನ್ನು ಖಚಿತಪಡಿಸುತ್ತದೆ. ಕೆಲಸ ಪ್ರಾರಂಭವಾದ ವೆಸ್ಟರ್ನ್ ಕ್ರಾಸ್ ಟ್ಯಾಕ್ಸಿವೇ, ಏರ್‌ಫೀಲ್ಡ್ ನ್ನು ಸಂಪರ್ಕಿಸುತ್ತದೆ ಮತ್ತು ಸಂಚಾರಕ್ಕೆ ಅವಕಾಶ ನೀಡುತ್ತದೆ.
ಮುಂದಿನ ದಶಕದ ವೇಳೆಗೆ, ವಿಮಾನ ನಿಲ್ದಾಣವು 230 ಸ್ಟ್ಯಾಂಡ್‌ಗಳನ್ನು ಹೊಂದಲು ಯೋಜಿಸಿದೆ; ಈಗ 140 ಸ್ಟ್ಯಾಂಡ್ ಗಳಿವೆ. 2026 ರಲ್ಲಿ ಮೆಟ್ರೋ ಸಂಪರ್ಕದ ಜೊತೆಗೆ, ಸಬ್ ಅರ್ಬನ್ ರೈಲಿಗೆ ಕಾರಿಡಾರ್ ಕೂಡ ಇರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪೂರ್ವ ಭಾಗದಿಂದ ಭವಿಷ್ಯದ ಸುರಂಗಕ್ಕಾಗಿ ಜಾಗವನ್ನು ಕಾಯ್ದಿರಿಸಲಾಗಿತ್ತು. ಐದು ವರ್ಷಗಳಲ್ಲಿ ವಿಮಾನ ನಿಲ್ದಾಣವು ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಸತ್ಯಕಿ ರಘುನಾಥ್ ಹೇಳಿದರು.