ಮುಂಬೈ:
‘ಹೌಸ್ ಅರೆಸ್ಟ್’ ರಿಯಾಲಿಟಿ ಶೋನಲ್ಲಿ ಅಶ್ಲೀಲ ವಿಷಯವನ್ನು ಬಳಸಿದ್ದಕ್ಕಾಗಿ ವಿವಾದಲ್ಲಿ ಸಿಲುಕಿರುವ ನಟ ಅಜಾಜ್ ಖಾನ್ ಇದೀಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮದುವೆ ಭರವಸೆ ನೀಡಿ ನಟ ಅಜಾಜ್ ಖಾನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿಯೊಬ್ಬರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮುಂಬೈನ ಚಾರ್ಕೋಪ್ ಪೊಲೀಸರು ನಟ ಅಜಾಜ್ ಖಾನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 64, 64(2)(ಎಂ), 69, ಮತ್ತು 74 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಟಿ ನೀಡಿದ ದೂರಿನ ಪ್ರಕಾರ, OTT ಯಲ್ಲಿ ಪ್ರಸಾರವಾಗುವ ಹೌಸ್ ಅರೆಸ್ಟ್ ರಿಯಾಲಿಟಿ ಶೋನಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಕಾರ್ಯಕ್ರಮದ ನಿರ್ಮಾಣದ ಸಮಯದಲ್ಲಿ, ಅವರು ಮದುವೆಯ ಪ್ರಸ್ತಾಪವನ್ನು ಮುಂದಿಟ್ಟು ಪದೇ ಪದೇ ಭರವಸೆ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ. ಮಾರ್ಚ್ 25 ರಂದು, ಖಾನ್ ತನ್ನ ಮನೆಯಲ್ಲಿ ಮದುವೆಯ ಭರವಸೆಯನ್ನು ನೆಪವಾಗಿ ಬಳಸಿಕೊಂಡು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ನಟಿ ಹೇಳಿದ್ದಾರೆ. ಕೆಲ ದಿನಗಳ ಬಳಿಕ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಉಲ್ಲು ಆ್ಯಪ್‌ನಲ್ಲಿ ಪ್ರಸಾರವಾದ ‘ಹೌಸ್ ಅರೆಸ್ಟ್’ ರಿಯಾಲಿಟಿ ಶೋನಲ್ಲಿ ಅಶ್ಲೀಲ ವಿಷಯವನ್ನು ಬಳಸಿದ್ದಕ್ಕಾಗಿ ಮುಂಬೈ ಪೊಲೀಸರು ಶುಕ್ರವಾರ ನಟ ಅಜಾಜ್ ಖಾನ್, ನಿರ್ಮಾಪಕ ರಾಜ್‌ಕುಮಾರ್ ಪಾಂಡೆ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಜರಂಗದಳದ ಕಾರ್ಯಕರ್ತ ಗೌತಮ್ ರವ್ರಿಯಾ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ನಟ ಅಜಾಜ್ ಖಾನ್ ಅವರ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಈ ದೂರು ಬಂದಿದೆ. ವೀಡಿಯೊದಲ್ಲಿ, ಅವರು ಮಹಿಳೆಯರು ಸೇರಿದಂತೆ ಸ್ಪರ್ಧಿಗಳಿಗೆ ಲೈಂಗಿಕ ಭಂಗಿಗಳನ್ನು ನಟಿಸಲು ಕೇಳುತ್ತಿರುವುದು ಕಂಡು ಬಂದಿದೆ.
ಬಜರಂಗದಳದ ಕಾರ್ಯಕರ್ತ ಗೌತಮ್ ರವ್ರಿಯಾ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ನಟ ಅಜಾಜ್ ಖಾನ್, ‘ಹೌಸ್ ಅರೆಸ್ಟ್’ ವೆಬ್ ಶೋನ ನಿರ್ಮಾಪಕ ರಾಜ್‌ಕುಮಾರ್ ಪಾಂಡೆ ಮತ್ತು ಉಲ್ಲು ಆ್ಯಪ್‌ನ ಇತರ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ” ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಯಕ್ರಮದ ನಿರೂಪಕ ಅಜಾಜ್ ಖಾನ್ ಮತ್ತು ಹೌಸ್ ಅರೆಸ್ಟ್‌ನ ನಿರ್ಮಾಪಕ ರಾಜ್‌ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ವಿವಾದದ ನಂತರ ಉಲ್ಲು ಆಪ್ ಹೌಸ್ ಅರೆಸ್ಟ್ ರಿಯಾಲಿಟಿ ಶೋವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
