ಜೈಪುರ:
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಆವರಣದಲ್ಲಿ ಸಂಕಟ್ ಮೋಚನ್ ಮಹಾದೇವ್ ದೇವಾಲಯದ ಅಸ್ತಿತ್ವದ ಕುರಿತಾಗಿ ಸಲ್ಲಿಸಿರುವ ವಿಚಾರಣೆ ಅರ್ಜಿಯನ್ನು ರಾಜಸ್ಥಾನದ ಅಜ್ಮೀರ್ ನ್ಯಾಯಾಲಯ ಸ್ವೀಕರಿಸಿದೆ. ಈ ಕುರಿತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ದರ್ಗಾ ಸಮಿತಿ ಅಜ್ಮೀರ್ ಮತ್ತು ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಮಾಹಿತಿ ನೀಡುವಂತೆ ನೊಟೀಸ್ ನೀಡಿದೆ.
ಸಿವಿಲ್ ನ್ಯಾಯಾಧೀಶ ಮನಮೋಹನ್ ಚಂದೇಲ್ ಅವರ ಪೀಠವು ಈ ಆದೇಶವನ್ನು ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಪಡಿಸಲಾಗಿದೆ. ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಈ ಅರ್ಜಿ ಸಲ್ಲಿಸಿದ್ದು, ನಿವೃತ್ತ ನ್ಯಾಯಮೂರ್ತಿ ಹರ್ವಿಲಾಸ್ ಶಾರದಾ ಅವರು ಬರೆದಿರುವ ಅಜ್ಮೀರ್: ಹಿಸ್ಟಾರಿಕಲ್ ಆಂಡ್ ಡಿಸ್ಕ್ರಿಪ್ಟಿವ್ ಎಂಬ ಪುಸ್ತಕವನ್ನು ಆಧರಿಸಿದೆ.
ಈ ಕೃತಿಯಲ್ಲಿ ಉಲ್ಲೇಖಿಸಿರುವಂತೆ ದರ್ಗಾದ ನಿರ್ಮಾಣದಲ್ಲಿ ದೇವಾಲಯದ ಅವಶೇಷಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ದರ್ಗಾ ಸಂಕೀರ್ಣದಲ್ಲಿ ಜೈನ ದೇವಾಲಯವೂ ಅಸ್ತಿತ್ವದಲ್ಲಿದೆ ಎನ್ನಲಾಗಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರಾಮ್ ಸ್ವರೂಪ್ ಬಿಷ್ಣೋಯ್, ದರ್ಗಾ ಸಂಕೀರ್ಣದ ಎಎಸ್‌ಐ ಸಮೀಕ್ಷೆಗೆ ಮನವಿ ಮಾಡಲು ಐತಿಹಾಸಿಕ ಪುರಾವೆಗಳು ಮತ್ತು ದಾಖಲೆಗಳು ಸೇರಿ 38 ಪುಟಗಳ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಅಜ್ಮೀರ್ ದರ್ಗಾವನ್ನು ಶಿವ ದೇವಾಲಯವೆಂದು ಘೋಷಿಸುವಂತೆ ಕೋರಿ ಹಿಂದೂ ಸೇನಾ ಸಲ್ಲಿಸಿದ ಅರ್ಜಿಯನ್ನು ಪುರಷ್ಕರಿಸಲು ಅಜ್ಮೀರ್ ನ್ಯಾಯಾಲಯ ಈ ವರ್ಷ ಸೆಪ್ಟಂಬರ್‌ನಲ್ಲಿ ನಿರಾಕರಿಸಿದ ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ. ತನ್ನ ನಿರ್ಧಾರಕ್ಕೆ ಈ ಪ್ರಕರಣದ ವಿಚಾರಣೆ ನಡೆಸಲು ತನಗೆ ಅಧಿಕಾರ ವ್ಯಾಪ್ತಿ ಇಲ್ಲದಿರುವುದು ಕಾರಣ ಎಂದು ಅದು ಉಲ್ಲೇಖಿಸಿತ್ತು. ಅಲ್ಲದೆ, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮಂದೂಡಿತ್ತು. ಇದೀಗ ಮತ್ತೆ ವಿಚಾರಣೆಗೆ ಒಪ್ಪಿರುವ ಕೋರ್ಟ್ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಗೊಳಿಸಿದೆ.