ಇಂಫಾಲ್:
ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಟಗಾರರು ಎಕೆ 47 ರೈಫಲ್ ಹಿಡಿದು ಮೈದಾನಕ್ಕಿಳಿದಿದ್ದ ಘಟನೆ ವರದಿಯಾಗಿತ್ತು. ಆ ವಿಡಿಯೊ ಭಾರೀ ವೈರಲಾಗ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರುʼ ಐವರನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ತಂಡವೊಂದರ ಆಟಗಾರರು ಅಮೆರಿಕ ದೇಶ ತಯಾರಿಸುವ ಎಕೆ-47 ರೈಫಲ್‌ಗಳೊಂದಿಗೆ ಕಾಣಿಸಿಕೊಂಡಿದ್ದರು. ಆ ಕುರಿತಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಐವರು ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗ್ಯಾಮ್ನೋಮ್‌ಫೈ ಗ್ರಾಮದಲ್ಲಿರುವ ನೊಹ್ಜಾಂಗ್ ಕಿಪ್ಗೆನ್ ಸ್ಮಾರಕ ಆಟದ ಮೈದಾನದಲ್ಲಿ ಪಂದ್ಯವನ್ನು ಆಯೋಜಿಸಲಾಗಿತ್ತು.
ಮಣಿಪುರದ ರಾಜಧಾನಿ ಇಂಫಾಲ್‌ನಿಂದ 30 ಕಿಲೋಮೀಟರ್ ದೂರದಲ್ಲಿರುವ ಆಟದ ಮೈದಾನವೊಂದರಲ್ಲಿ ಫುಟ್ಬಾಲ್ ಆಟಗಾರರು ಕೈಯಲ್ಲಿ ಎಕೆ 47 ಗನ್ ಹಿಡಿದು ಬಂದಿದ್ದರು. ಆಟಗಾರರ ಈ ವರ್ತನೆಯು ಅಲ್ಲಿ ನೆರೆದಿದ್ದವರಲ್ಲಿ ಆತಂಕ ಸೃಷ್ಟಿಸಿತ್ತು. ಮಣಿಪುರದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಸಂಘರ್ಷದ ನಡುವೆ ಇದು ಜನರನ್ನು ಭಯಭೀತರನ್ನಾಗಿಸಿತ್ತು. ಆಟಗಾರರು ರೈಫಲ್ ಹಿಡಿದುಕೊಂಡೇ ಆಟವಾಡಿದ್ದು, ಆ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಘಟನೆ ಕುರಿತು ಪೊಲೀಸರಿಗೆ ತಡವಾಗಿ ಮಾಹಿತಿ ಸಿಕ್ಕಿದ್ದು, ಬುಧವಾರ(ಫೆ.12) ಐವರನ್ನು ಬಂಧಿಸಿದ್ದಾರೆ. ಬಂಧಿತ ಆಟಗಾರರನ್ನು ಮಾಂಗ್ಟಿನ್ಲೆನ್ ಕಿಪ್ಜೆನ್ ಅಲಿಯಾ ಬೇಮಾಂಗ್, ಮಾಂಗ್ಟಿನ್ಲೆನ್ ಕಿಪ್ಜೆನ್, ಸೀತೆನ್ಮಾಂಗ್ ಕಿಪ್ಜೆನ್, ಲುನ್ಮಿನ್ಸೆ ಕಿಪ್ಜೆನ್ ಮತ್ತು ಲುಂಕೋಗಿನ್ ಕಿಪ್ಜೆನ್ ಎಂದು ಗುರುತಿಸಲಾಗಿದೆ.
ಪೊಲೀಸರು ಐವರು ಆಟಗಾರರನ್ನು ಮಾತ್ರ ಬಂಧಿಸಿದ್ದು, ಹತ್ತಾರು ಆಟಗಾರರು ರೈಫಲ್ ಹಿಡಿದಿದ್ದರು ಎಂದು ತಿಳಿದು ಬಂದಿದೆ. ಮಣಿಪುರದಲ್ಲಿ ಕಳೆದ ಕೆಲ ವರ್ಷಗಳಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಗಲಾಟೆ ಗಲಭೆಗಳು ನಡೆಯುತ್ತಲೇ ಇವೆ. ಹೀಗಿರುವಾಗ ಕುಕಿ ಸಮುದಾಯದ ಆಟಗಾರರು ಶಸ್ತ್ರಸಜ್ಜಿತರಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಈ ವಿಡಿಯೊವನ್ನು ಕುಕಿ ಲ್ಯಾಂಡ್ ಎಂಬ ಟ್ಯಾಗ್ಲೈನ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು.
ಮಣಿಪುರದ ಹಿಂಸಾಚಾರದಲ್ಲಿ 221 ಜನರು ಮೃತಪಟ್ಟಿದ್ದಾರೆ. 60,000 ಜನರು ವಾಸವಿದ್ದ ಪ್ರದೇಶದಿಂದ ಸ್ಥಳಾಂತರಗೊಂಡಿದ್ದಾರೆ.1500 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 4,786 ಮನೆಗಳು ಬೆಂಕಿಗೆ ಆಹುತಿಯಾಗಿವೆ. ದೇವಾಲಯಗಳು ಮತ್ತು ಚರ್ಚ್‌ಗಳು ಸೇರಿದಂತೆ 386 ಧಾರ್ಮಿಕ ಕೇಂದ್ರಗಳು ಧ್ವಂಸಗೊಂಡಿವೆ.
