ಕೊಪ್ಪಳ:
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಹರಿದು ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ನಡೆದಿದೆ. ರಮೇಶ ಜವಳಗೇರಿ (27), ಸಿದ್ದಪ್ಪ ಪ್ಯಾಟ್ಯಾಳ್ (34) ಮೃತ ಯುವಕರು. ಸಾವನ್ನಪ್ಪಿರುವ ಇಬ್ಬರು ಯುವಕರು ಕನಕಗಿರಿ ತಾಲೂಕಿನ ಗುಡೂರಿನ ನಿವಾಸಿಗಳಾಗಿದ್ದು, ಇಂದು ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಮರಳು ತುಂಬಿದ ಟಿಪ್ಪರ್ ಹರಿದಿದೆ. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿ ಯುವಕರ ದೇಹ ಛಿದ್ರವಾಗಿದೆ.
ನವಲಿ ಕಡೆಯಿಂದ ಗುಡೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಪೈಕಿ ಒಬ್ಬನ ಮೃತದೇಹ ಛಿದ್ರ ಛಿದ್ರವಾಗಿದೆ. ರಸ್ತೆ ತುಂಬ ದೇಹದ ಮಾಂಸ ಚೆಲ್ಲಾಪಿಲ್ಲಿಯಾಗಿದೆ. ಮತ್ತೋರ್ವ ಯುವಕನ ತಲೆ ಛದ್ರಗೊಂಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಗಲು ರಾತ್ರಿ ಎನ್ನದೇ ಇಲ್ಲಿ ಮರಳು ತುಂಬಿದ ಟಿಪ್ಪರ್ ಗಳು ಓಡಾಡುತ್ತಿದ್ದು, ಅಕ್ರಮ ಮರಳು ದಂಧೆಗೆ ಯುವಕರು ಬಲಿಯಾಗಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಈ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.








