ನವದೆಹಲಿ:
ಕೆಂಪು ಕೋಟೆಯ ಬಳಿ ಸೋಮವಾರ ರಾತ್ರಿ ಬಾಂಬ್ ಸ್ಫೋಟ ನಡೆದ ಬಳಿಕ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಜಾವೇದ್ ಅಹ್ಮದ್ ಸಿದ್ದಿಕಿ ಸೇರಿದಂತೆ ಡಾ. ಶಾಹೀನ್ ಸಯೀದ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಎಂಬವರನ್ನು ಬಂಧಿಸಲಾಗಿತ್ತು. ಬಳಿಕ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಅಕ್ರಮ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ವಿವಿಯ ಸ್ಥಾಪಕ 9 ಕಂಪೆನಿಗಳನ್ನು ನಡೆಸಿದ್ದು, 7.5 ಕೋಟಿ ರೂ. ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ವಿಶ್ವವಿದ್ಯಾನಿಲಯದ ಹಣಕಾಸು ವ್ಯವಹಾರದ ಕುರಿತು ಪ್ರತ್ಯೇಕ ಜಾರಿ ನಿರ್ದೇಶನಾಲಯ ತನಿಖೆಯನ್ನು ನಡೆಸುತ್ತಿದೆ.
ಜಾವೇದ್ ಅಹ್ಮದ್ ಸಿದ್ದಿಕಿ ಮೇಲೆ ಹಳೆಯ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿದೆ. ಈ ಎರಡು ಪ್ರಕರಣದಲ್ಲಿ ಸಿದ್ದಿಕಿ ಮತ್ತು ಆತನ ಸಹಚರನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜಾವೇದ್ ಅಹ್ಮದ್ ಸಿದ್ದಿಕಿ ವಿರುದ್ದದ ಎಲ್ಲ ಆರೋಪಗಳನ್ನು ನಿರಾಕರಿಸಿರುವ ವಿಶ್ವವಿದ್ಯಾನಿಲಯದ ಕಾನೂನು ಸಲಹೆಗಾರ ಮೊಹಮ್ಮದ್ ರಾಜಿ, 7.5 ಕೋಟಿ ರೂ. ವಂಚನೆ ಪ್ರಕರಣ, ಶಕೀಲ್ ನೇಮಕಾತಿ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ, ಸಾಫ್ಟ್‌ವೇರ್, ಹಣಕಾಸು ಸೇವೆಗಳು ಮತ್ತು ಇಂಧನ ವಲಯಗಳ ಒಂಬತ್ತು ಕಂಪೆನಿಗಳೊಂದಿಗೆ ವ್ಯವಹಾರ ನಡೆಸುತ್ತಿರುವ ಜಾವೇದ್ ಅಹ್ಮದ್ ಸಿದ್ದಿಕಿ ಮಧ್ಯಪ್ರದೇಶದ ಮಾವ್‌ನಲ್ಲಿ ಜನಿಸಿದ್ದನು. ಒಂಬತ್ತು ಕಂಪೆನಿಗಳು ಫರಿದಾಬಾದ್ ವಿಶ್ವವಿದ್ಯಾಲಯವನ್ನು ನಿರ್ವಹಣೆ ಮಾಡುತ್ತಿರುವ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ನೊಂದಿಗೆ ಸಂಬಂಧ ಹೊಂದಿವೆ.
ದೆಹಲಿಯ ಓಖ್ಲಾ ನಗರದ ಅಲ್-ಫಲಾಹ್ ಹೌಸ್ ವಿಳಾಸದಲ್ಲಿ ಎಲ್ಲ ಒಂಬತ್ತು ಕಂಪೆನಿಗಳು ನೋಂದಾಯಿಸಲ್ಪಟ್ಟಿವೆ. ಮೊದಲ ಕಂಪೆನಿ 1992ರಲ್ಲಿ ಪ್ರಾರಂಭವಾಗಿದ್ದು, ಅಲ್-ಫಲಾಹ್ ಇನ್ವೆಸ್ಟ್‌ಮೆಂಟ್, ಬಳಿಕ ಅಲ್-ಫಲಾಹ್ ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನವನ್ನು ನೋಂದಾಯಿಸಲಾಗಿದೆ. ಇದರಲ್ಲಿ ದೆಹಲಿ ಬಾಂಬ್ ಸ್ಪೋಟದ ಆರೋಪಿಗಳಾಗಿರುವ ಸಯೀದ್, ಶಕೀಲ್ ಮತ್ತು ಇತರ ಆರೋಪಿಗಳು ಉದ್ಯೋಗಿಗಳಾಗಿದ್ದರು. ಇದಲ್ಲದೆ ಅಲ್-ಫಲಾಹ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಅಲ್-ಫಲಾಹ್ ಇಂಡಸ್ಟ್ರಿಯಲ್ ರಿಸರ್ಚ್ ಫೌಂಡೇಶನ್, ಅಲ್-ಫಲಾಹ್ ಎಜುಕೇಶನ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್, ಎಂಜೆಹೆಚ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಅಲ್-ಫಲಾಹ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್, ಅಲ್-ಫಲಾಹ್ ಎನರ್ಜೀಸ್ ಪ್ರೈವೇಟ್ ಲಿಮಿಟೆಡ್, ಟಾರ್ಬಿಯಾ ಶಿಕ್ಷಣ ಪ್ರತಿಷ್ಠಾನ ಸೇರಿವೆ. ಇವುಗಳಲ್ಲಿ ಹೆಚ್ಚಿನವುಗಳು 2019 ರವರೆಗೆ ಸಕ್ರಿಯವಾಗಿದ್ದು, ಬಳಿಕ ಅವುಗಳನ್ನು ಮುಚ್ಚಲಾಗಿದೆ.
1997ರಲ್ಲಿ ಎಂಜಿನಿಯರಿಂಗ್ ಕಾಲೇಜು ಆಗಿ ಆರಂಭಗೊಂಡ ಅಲ್-ಫಲಾಹ್ ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನ ನ್ಯಾಕ್ ನಿಂದಲೂ ಈಗ ವಿಚಾರಣೆಯನ್ನು ಎದುರಿಸುತ್ತಿದೆ. ಈ ಕಾಲೇಜಿನ ಕಟ್ಟಡದಲ್ಲೇ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್‌ನ ಕಚೇರಿಯನ್ನು ನಡೆಸಲಾಗುತ್ತಿದೆ.
ಅಲ್-ಫಲಾಹ್ ಗ್ರೂಪ್ ನ ಕಂಪೆನಿಗಳಲ್ಲಿ ಹಣ ಹೂಡಿಕೆ ಮಾಡಲು ನಕಲಿ ಯೋಜನೆಗಳನ್ನು ಪ್ರಾರಂಭಿಸಲಾಗಿತ್ತು ಎಂದು ಈ ಹಿಂದೆ ಹಳೆಯ ಕ್ರಿಮಿನಲ್ ಪ್ರಕರಣವೊಂದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಿದ್ದಿಕಿಯನ್ನು 2001ರಲ್ಲಿ ಬಂಧಿಸಲಾಗಿತ್ತು. 2003ರ ಮಾರ್ಚ್ ತಿಂಗಳಲ್ಲಿ ದೆಹಲಿ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. 2004ರ ಫೆಬ್ರವರಿಯಲ್ಲಿ ಸಿದ್ದಿಕಿ ಜಾಮೀನು ಪಡೆದರೂ ವಂಚನೆಗೊಳಗಾದವರಿಗೆ ಹಣ ಮರುಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು. ಸಿದ್ದಿಕಿ ಹೂಡಿಕೆದಾರರಿಗೆ ವಂಚಿಸಿದ್ದಾರೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ 2020ರ ಜನವರಿಯಲ್ಲಿ ದೆಹಲಿ ಪೊಲೀಸರು ಓಖ್ಲಾ ಕಚೇರಿ ಮೇಲೆ ದಾಳಿ ನಡೆಸಿದ್ದರು.








