ದೆಹಲಿ:
ದೆಹಲಿಯಲ್ಲಿ ಭಾನುವಾರ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಫರಿದಾಬಾದ್ ನಂಟು ಇದೆಯೇ ಎನ್ನುವ ಕುರಿತು ಈಗ ತನಿಖೆ ನಡೆಸಲಾಗುತ್ತಿದೆ. ಯಾಕೆಂದರೆ ಹರಿಯಾಣದ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯ ಈಗ ತನಿಖಾಧಿಕಾರಿಗಳ ಗಮನ ಸೆಳೆದಿದೆ. ಇಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಎರಡು ಎಕೆ -47 ರೈಫಲ್‌ಗಳು, 350 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ. ಇದರ ಹಿಂದೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಸಂಚು ಇರಬಹುದೆಂದು ಶಂಕಿಸಲಾಗಿದೆ.
2015 ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ವು ಗುರುತಿಸಿರುವ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯವು ಧೌಜ್‌ನಲ್ಲಿ 70 ಎಕರೆ ವ್ಯಾಪ್ತಿಯಲ್ಲಿ ಕ್ಯಾಂಪಸ್ ಅನ್ನು ಹೊಂದಿದೆ. ಇಲ್ಲಿ ಜಮ್ಮು ಮತ್ತು ಕಾಶ್ಮೀರದೊಂದಿಗೆ ಸಂಪರ್ಕ ಹೊಂದ್ದ ಏಳು ಶಂಕಿತರನ್ನು ಬಂಧಿಸಲಾಗಿದೆ. ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಡಾ. ಮುಜಮ್ಮಿಲ್ ಶಕೀಲ್ ಎಂಬಾತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಶಕೀಲ್ ಕೊಠಡಿಯಿಂದ ಅಮೋನಿಯಂ ನೈಟ್ರೇಟ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಸೆಂಟರ್‌ನ ಭಾಗವಾಗಿರುವ ಅಲ್-ಫಲಾಹ್ ಆಸ್ಪತ್ರೆಯು 650 ಹಾಸಿಗೆಗಳ ದತ್ತಿ ಆಸ್ಪತ್ರೆಯನ್ನು ಕೂಡ ಹೊಂದಿದೆ. ಇಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯಗಳು ಇವೆ. ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ಇದನ್ನು ಸ್ಥಾಪಿಸಿದ್ದು, ನ್ಯಾಕ್ ನಿಂದ ‘ಎ’ ದರ್ಜೆಯ ಮಾನ್ಯತೆಯನ್ನು ಕೂಡ ಪಡೆದಿದೆ.
ವಿಶ್ವವಿದ್ಯಾನಿಲಯದಲ್ಲಿ ಎಂಜಿನಿಯರಿಂಗ್, ನಿರ್ವಹಣೆ, ವಾಣಿಜ್ಯ, ಶಿಕ್ಷಣ, ಮಾನವಿಕತೆ, ಕಂಪ್ಯೂಟರ್ ವಿಜ್ಞಾನ, ಕಾನೂನು ಮತ್ತು ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನಗಳು ಸೇರಿದಂತೆ ವಿವಿಧ ವಿಭಾಗಗಳ ಕೋರ್ಸ್ ಗಳು, ಡಿಪ್ಲೊಮಾ, ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆಯುವ ಅವಕಾಶವನ್ನು ಕೂಡ ಇದು ಒದಗಿಸುತ್ತಿದೆ.
ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ಕೇವಲ ವಿಶ್ವವಿದ್ಯಾನಿಲಯವನ್ನು ಮಾತ್ರವಲ್ಲ ಇತರ ಹಲವಾರು ಇತರ ಶಿಕ್ಷಣ ಸಂಸ್ಥೆಗಳನ್ನು ಕೂಡ ನಡೆಸುತ್ತಿದೆ. ದೆಹಲಿಯಲ್ಲಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಹೊರಗೆ ಸೋಮವಾರ ಬಾಂಬ್ ದಾಳಿ ನಡೆದ ಬಳಿಕ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಗೆ ಶಿಕ್ಷಣ ಸಂಸ್ಥೆಯಿಂದ ಹಣ ಬಂದಿರುವ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಇದರ ಜಾಲವನ್ನು ತನಿಖೆ ನಡೆಸಲಾಗುತ್ತಿದೆ.
ಈ ವೇಳೆ ಫರಿ ದಾಬಾದ್ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಅಕ್ರಮಗಳು ಬೆಳಕಿಗೆ ಬಂದಿರುವುದರಿಂದ ಇದಕ್ಕೂ ದೆಹಲಿಯ ಸ್ಪೋಟಕ್ಕೂ ನಂಟು ಇದೆಯೇ ಎನ್ನುವ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ನವೆಂಬರ್ 10 ರಂದು ಸಂಜೆ 6.22ಕ್ಕೆ ದಾಖಲಾಗಿರುವ ಸಿಸಿಟಿವಿ ವಿಡಿಯೊದಲ್ಲಿ ದೆಹಲಿಯಲ್ಲಿ ಸ್ಪೋಟಗೊಂಡ ಕಾರನ್ನು ವ್ಯಕ್ತಿಯೊಬ್ಬ ಚಾಲನೆ ಮಾಡಿಕೊಂಡು ಹೋಗಿರುವುದು ಕಾಣಬಹುದು. ದೆಹಲಿಯಲ್ಲಿ ಸ್ಫೋಟ ನಡೆಯುವ ಮೊದಲು ಆ ವ್ಯಕ್ತಿ ತನ್ನ ಸಂಬಂಧಿಕರನ್ನು ಬಿಡಲು ಹಳೆಯ ದೆಹಲಿ ರೈಲು ನಿಲ್ದಾಣಕ್ಕೆ ಹೋಗಿದ್ದನು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 16 ಮತ್ತು 18 ಸೇರಿದಂತೆ ಕಠಿಣ ಭಯೋತ್ಪಾದನಾ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.








