ಬೆಂಗಳೂರು
ರಾಜ್ಯಾದಾದ್ಯಂತ ಹಿಂದುಳಿದ ವರ್ಗದ ಪ್ರವರ್ಗ-1ಕ್ಕೆ ಸೇರಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ 46 ಜಾತಿಗಳನ್ನೊಳಗೊಂಡ ಅಲೆಮಾರಿ ಕುಟುಂಬಗಳು, ಹಲವಾರು ವರ್ಷಗಳಿಂದ ಬೀದಿ ಬದಿಗಳಲ್ಲಿ ಸರಕಾರಿ, ಖಾಸಗಿ ಖಾಲಿ ನಿವೇಶನಗಳಲ್ಲಿ ಗುಡಿಸಲು-ಗುಡಾರಗಳನ್ನು ಕಟ್ಟಿಕೊಂಡು ಜೀವನೋಪಾಯಕ್ಕಾಗಿ ಹಳ್ಳಿಗಳ ಮೇಲೆ ವ್ಯಾಪಾರಕ್ಕಾಗಿ ಬಾಂಡೆ ವ್ಯಾಪಾರ ಸೂಜೆ-ದಾರ, ಪಿನ್ನು, ಟೀಪು, ಬೀಗ ರಿಪೇರಿ ಮಾಡುವುದು, ದನ-ಕುರಿ-ಮೇಕೆ ಹಂದಿ ಸಾಕಾಣಿಕೆ, ಬಲೆ ಹೆಣೆಯುವುದು, ಮೀನು ಹಿಡಿದು ಮಾಡುವುದು, ಧಾರ್ಮಿಕ ಬಿಕ್ಷಾಟನೆ, ಭವಿಷ್ಯ ಹೇಳುವುದು. ಗಿಣಿ ಭವಿಷ್ಯ ಹೇಳುವುದು, ಬಳೆ ಇತ್ಯಾದಿಗಳನ್ನು ಮಾರುತ್ತಾ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದಾರೆ.
ಬಹಳ ಮುಖ್ಯವಾಗಿ ನಮ್ಮ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ ಸುಮಾರು 10 ವರ್ಷಗಳಿಂದ ಮೇಲ್ಪಟ್ಟು ಗುಡಿಸಲು ಡೇರೆ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಅವರ ಹೆಸರಿಗೆ ಪಹಣಿ ಪತ್ರವನ್ನು ನೀಡುವುದು ಹಾಗೂ ಈ ಜನರಿಗೆ ರುದ್ರಭೂಮಿಗಾಗಿ ಸರ್ಕಾರಿ ಜಾಗವನ್ನು ಕಾಯ್ದಿರಿಸುವುದು, ಅಲೆಮಾರಿ ಜನರು ಹೆಚ್ಚಾಗಿ ವಾಸಿಸುತ್ತಿರುವ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯ ಭವನಗಳನ್ನು ನಿರ್ಮಿಸುವುದು, ಈ ಜನಾಂಗದ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ತೆರೆಯುವುದು ಅಲ್ಲದೆ ಈ ಜನಾಂಗದವರಿಗೆ ಇಲಾಖೆ ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ವಿದ್ಯಾರ್ಥಿಗಳಿಗೆ ನೀಡುವ ಶಾಲಾ ವರ್ಗಾವಣಾ ಪತ್ರದಲ್ಲಿ ಅವರ ಹೆಸರಿನ ಜೊತೆಗೆ ಜಾತಿ ಮತ್ತು ಪ್ರವರ್ಗವನ್ನು ಗುರುತಿಸಬೇಕು ಅಲ್ಲದೆ ಈ ಜನಾಂಗದವರಿಗೆ ಹೆಚ್ಚಿನ ಮೀಸಲಾತಿಯನ್ನು ನೀಡಬೇಕು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಅಲೆಮಾರಿ ವಿದ್ಯಾರ್ಥಿಗಳಿಗೆ ಯಾವುದೇ ತಾರತಮ್ಯ ಮಾಡದೆ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು. NEET ಮತ್ತು CET ಪರೀಕ್ಷೆಗೆ ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳಿಗೆ ನೀಡುವ ಮಾನದಂಡವನ್ನು ನಮ್ಮ ವಿದ್ಯಾರ್ಥಿಗಳಿಗೂ ನೀಡಬೇಕು. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ಕೂಡಲೇ ನೇಮಕಾತಿ ಮಾಡಿ ಹೆಚ್ಚಿನ ಅನುದಾನ ನೀಡಬೇಕು.
ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ 2024-2025ರ ಆಯವ್ಯಯದ ಪುಟ ಸಂಖ್ಯೆ 14. ಚುಕ್ಕೆ ಗುರುತು 2 ರಲ್ಲಿ ಸೂಚಿಸಿದಂತೆ ಅಲೆಮಾರಿ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಏಕಲವ್ಯ ಮಾದರಿಯ ವಸತಿ ಶಾಲೆಯಲ್ಲಿ 20 ಸೀಟು ಮೀಸಲು ಹಾಗೂ ಪಡಿತರ ಚೀಟಿ ಮುಂತಾದ ಸರ್ಕಾರಿ ದಾಖಲೆಗಳನ್ನು ಒದಗಿಸಲು ವಿಶೇಷ ಕೋಶ ಸ್ಥಾಪನೆ ಮತ್ತು ಪುಟ ಸಂಖ್ಯೆ 14ರ ಹಿಂದುಳಿದ ವರ್ಗಗಳ ಕಲ್ಯಾಣದ ಚುಕ್ಕೆ ಗುರುತು 5ರಲ್ಲಿ ಅಲೆಮಾರಿ, ಅರೆಅಲೆಮಾರಿ ಸ್ಥಿತಿಗತಿ ಅಧ್ಯಯನಕ್ಕಾಗಿ, ಅಭಿವೃದ್ಧಿಗಾಗಿ ಕರ್ನಾಟಕ ಅಲೆಮಾರಿ ಆಯೋಗ ರಚನೆ ಎಂದು ಸೂಚಿಸಿರುವುದು ಕೇವಲ ಆಯವ್ಯಯದ ಮುಖ್ಯಾಂಶಗಳಿಗೆ ಸೀಮಿತವಾಗಿದೆ ಹೊರತು ಅದು ಇಷ್ಟರವರೆಗೂ ಅನುಷ್ಠಾನಗೊಳ್ಳಲಿಲ್ಲ. ಸರಕಾರ ಈ ಮೇಲಿನ ಎಲ್ಲ ಅಂಶಗಳನ್ನು ನಮ್ಮ ಆಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಕ್ಷೇಮಾಭಿವೃದ್ಧಿಗಾಗಿ ಕೂಡಲೇ ಅನುಷ್ಟಾನಗೊಳಿಸಬೇಕೆಂದು ಒಕ್ಕೂಟದ ವತಿಯಿಂದ ವಿನಂತಿಸುತ್ತೇವೆ.
ಈ ಬಗ್ಗೆ ನಾವು ಒಕ್ಕೂಟದ ವತಿಯಿಂದ ಹಲವಾರು ಬಾರಿ ಮನವಿ ನೀಡಿದರೂ ಸರಕಾರ ಸ್ಪಂದಿಸದೆ ಇರುವುದರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರಕಾರದ ವಿರುದ್ಧ ಅಹೋರಾತ್ರಿ ಶಾಂತಿಯುತವಾಗಿ ಧರಣಿ ನಡೆಸಿದೆವು. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕಾಗಿ ಪ್ರತಿಭಟನೆ ಮುಂದುವರಿಯಲಿದೆ.
