ಹುಳಿಯಾರು
ಅಲೆಮಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿರುವ ಲೇಔಟ್‌ನಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಹಾಗೂ ಉಳಿದ ಅಲೆಮಾರಿಗಳಿಗೆ ವಸತಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಹುಳಿಯಾರಿನ ನಾಡಕಛೇರಿ ಬಳಿ ಶುಕ್ರವಾರ ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂದಿಜೋಗಿ ರಾಜಣ್ಣ ಅವರು ಮಾತನಾಡಿ ಹುಳಿಯಾರು ಕೆರೆ ಅಂಗಳದಲ್ಲಿನ ನಿರಾಶ್ರಿತ ಅಲೆಮಾರಿಗಳಿಗೆ ಕಂಪನಹಳ್ಳಿ ಬಳಿ ನಿವೇಶನ ನೀಡಲಾಗಿದೆ. ಕೆರೆಗೆ ನೀರು ಬಂದು ಮನೆಗಳು ಮುಳುಗಡೆಯಾಗಿ ವಾಸಿಸಲು ಬೇರೆಲ್ಲೂ ಸ್ಥಳವಕಾಶ ಇಲ್ಲದೆ ಸರ್ಕಾರ ನೀಡಿದ ನಿವೇಶನದಲ್ಲೇ ಟೆಂಟ್‌ಗಳನ್ನು ಹಾಕಿಕೊಂಡು 34 ಕುಟುಂಬಗಳು ವಾಸಿಸುತ್ತಿವೆ. ಆದರೆ ಕುಡಿಯುವ ನೀರು, ಚರಂಡಿ, ಬೀದಿದೀಪ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸದ ಪರಿಣಾಮ ಅಲೆಮಾರಿಗಳು ಅರಣ್ಯವಾಸಿಗಳಂತೆ ವನ್ಯಮೃಗಗಳಿಗೆ, ವಿಷಜಂತುಗಳಿಗೆ ಹೆದರಿಕೊಂಡು ನೀರಿನ ಹಾಹಾಕಾರ ಎದುರಿಸಿ ಬುದುಕು ನಡೆಸುತ್ತಿದ್ದೇವೆ ಎಂದು ಅಲೆಮಾರಿಗಳ ಅಳಲನ್ನು ವಿವರಿಸಿದರು.
ಅಲೆಮಾರಿಗಳಿಗೆ ಹಾಲಿ ಗುರುತಿಸಿರುವ ಕಂಪನಹಳ್ಳಿ ಬಳಿಯ ಜಮೀನಿನಲ್ಲಿ ಇನ್ನೂ 26 ನಿವೇಶನ ನೀಡಬಹುದಾಗಿದ್ದು ಹುಳಿಯಾರು ಕೆರೆ ಅಂಗಳದಲ್ಲಿ ನಿರಾಶ್ರಿತರಾಗಿರುವ ಉಳಿದ ಕುಟುಂಬಗಳಿಗೂ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದ್ದರೂ ಸಹ ನಿವೇಶನ ಹಂಚಿಕೆ ಮಾಡಿಲ್ಲ. ಪರಿಣಾಮ ಪಟ್ಟಣದಲ್ಲಿ ದುಬಾರಿ ಮನೆ ಬಾಡಿಕೆ ಕೊಟ್ಟು ಒಂದೊಂದು ಮನೆಯಲ್ಲಿ ಎರಡ್ಮೂರು ಕುಟುಂಬದವರು ವಾಸ ಮಾಡುತ್ತಿದ್ದಾರೆ, ಹಾಗಾಗಿ ಅಲೆಮಾರಿಗಳು ದುಡಿದ ಹಣ ಬಾಡಿಗೆಗೆ ಕೊಟ್ಟು ಉಪವಾಸ ಮಲಗುವಂತಾಗಿದೆ ಎಂದು ವಿವರಿಸಿದರು.
ಸರ್ಕಾರ ಅಲೆಮಾರಿಗಳ ಕಷ್ಟಕ್ಕೆ ನೆರವಾಗುವ ಸಲುವಾಗಿ ಕೋಟ್ಯಾಂತರ ರೂ. ಬಿಡುಗಡೆ ಮಾಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಸರ್ಕಾರ ನೀಡಿದ ಹಣ ಈಗಾಗಲೇ ವಾಪಸ್ಸು ಹೋಗಿದೆ. ಹಾಗಾಗಿ ಅಧಿಕಾರಿ ವರ್ಗದವರಿಗೆ ಎಚ್ಚರಿಸುವ ಮತ್ತು ಚುರುಕು ಮಾಡುವ ಸಲುವಾಗಿ ಮೂಲಸೌಕರ್ಯ ಕಲ್ಪಿಸುವಂತೆಯೂ, ಉಳಿದ ಅಲೆಮಾರಿಗಳಿಗೆ ನಿವೇಶನ ನೀಡುವಂತೆಯೂ, ನಿವೇಶನ ಕೊಟ್ಟಿರುವವರಿಗೆ ಮನೆ ಕಟ್ಟಿಕೊಡುವಂತೆಯೂ ಒತ್ತಾಯಿಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು ಬೇಡಿಕೆ ಈಡೇರುವವರೆವಗೂ ಧರಣಿ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.
ಧರಣಿಯಲ್ಲಿ ಅಲೆಮಾರಿಗಳಾದ ರಂಗನಾಥ್, ಪ್ರವೀಣ್, ಬಬ್ಬೂರಕ್ಕ, ನಾಗಮ್ಮ, ಗೋವಿಂದಪ್ಪ, ಮಾರಕ್ಕ, ಗಂಗಣ್ಣ, ಯಲ್ಲಮ್ಮ, ವೆಂಕಟಮ್ಮ, ಲತಾ, ಗಂಗಮ್ಮ, ಲಾವಣ್ಣ, ಸರ್ವಮ್ಮ, ಸುಬ್ಬಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ