ಚಿಕ್ಕಬಳ್ಳಾಪುರ :
ಕೆಂಪೇಗೌಡ ಎನ್ ವೆಂಕಟೇನಹಳ್ಳಿ
ದ್ರಾಕ್ಷಿ ಕಾಯಿ ಬಲಿತು ಹಣ್ಣಾಗುವ ಸಮಯವಿದು. ಈ ಹಂತದಲ್ಲಿ ವಾತವರಣದಲ್ಲಿ ದಿಢೀರ್ ಬದಲಾವಣೆ ಕಂಡು ಬಂದಿದ್ದು, ದ್ರಾಕ್ಷಿಗೆ ಎಲ್ಲಿ ಆಲಿಕಲ್ಲು ಮಳೆ ಬೀಳುತ್ತೊ ಎಂಬ ಆತಂಕ ಜಿಲ್ಲೆಯ ದ್ರಾಕ್ಷಿ ಬೆಳೆಗಾರರನ್ನು ಕಾಡತೊಡಗಿದೆ.
ಈಗ ಬಿಸಿಲ ತಾಪ ಜೋರಾಗಿದೆ. ಇದರ ಜೊತೆಗೆ ಕಳೆದೆರಡು ದಿನಗಳಿಂದ ಸಂಜೆಯಾಗುವಷ್ಟರಲ್ಲಿ ಆಗಸದಲ್ಲಿ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಕೆಲವೆಡೆ ಮಳೆಯೂ ಆಗುತ್ತಿದೆ. ವಾರದ ಹಿಂದೆಯಷ್ಟೇ ಜಿಲ್ಲೆಯ ಕೆಲವು ಕಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ದ್ರಾಕ್ಷಿ ನೆಲಕಚ್ಚಿತ್ತು.
ವಿವಿಧ ತಳಿ ದ್ರಾಕ್ಷಿ: ಜಿಲ್ಲೆಯಲ್ಲಿ ಸುಮಾರು 2500 ಹೇಕ್ಟೆರ್ಗೂ ಅಧಿಕ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ರಾಜ್ಯದಲ್ಲಿ ದ್ರಾಕ್ಷಿ ಬೆಳೆಯುವುದರಲ್ಲಿ ಜಿಲ್ಲೆಯೂ 2 ನೇ ಸ್ಥಾನ ಪಡೆದಿದೆ. ಕೃಷ್ಣಾ, ಶರತ್, ಸೊನೆಕಾ, ಸೂಪರ್ ಸೊನೆಕಾ, ರೆಡ್ ಗ್ಲೋಬ್, ದಿಲ್ಖುಷ್, ಅನಾಭಿಶ್, ಕಾಬೂಲ್, ಕಪ್ಪು ದ್ರಾಕ್ಷಿ (ಬೆಂಗಳೂರು ಬ್ಲೂ) ಹೀಗೆ ವಿವಿಧ ತಳಿಯ ದ್ರಾಕ್ಷಿಯನ್ನು ಜಿಲ್ಲೆಯ ರೈತರು ಬೆಳೆಯುತ್ತಿದ್ದಾರೆ.
ಆಲಿಕಲ್ಲು ಮಳೆ ಆತಂಕ: ಸದ್ಯ ಜಿಲ್ಲೆಯಲ್ಲಿ ದ್ರಾಕ್ಷಿ ಋತುಮಾನ ಶುರುವಾಗಿದೆ. ಪ್ರಸ್ತುತ ಶೇ 30 ರಷ್ಟು ದ್ರಾಕ್ಷಿ ತೋಟಗಳು ಕೊಯ್ಲಿಗೆ ಬಂದಿದೆ. ಉಳಿದ ಶೇ 70 ರಷ್ಟು ಮುಂದಿನ ತಿಂಗಳ ಆಚೆ, ಈಚೆ ಕೊಯ್ಲಿಗೆ ಬರಲಿವೆ. ಇಂತಹ ಸಮಯದಲ್ಲಿ ಆಲಿಕಲ್ಲಿನ ಮಳೆಯ ಜೊತೆಗೆ ಜೋರಾಗಿ ಗಾಳಿ ಬೀಸಿದರೆ ದ್ರಾಕ್ಷಿ ಬೆಳೆಗಾರರ ಆದಾಯಕ್ಕೆ ಪೆಟ್ಟು ಬೀಳುವ ಆತಂಕ ಬೆಳೆಗಾರರಲ್ಲಿ ಎದುರಾಗಿದೆ.
ವ್ಯಾಪಾರಸ್ಥರು ಠಿಕಾಣಿ: ಜಿಲ್ಲೆಯಲ್ಲಿ ಒಣ ಹವೆಯಿಂದಾಗಿ ತಾಜಾ ಹಣ್ಣಿನ ಬೇಡಿಕೆ ಇದೆ. ಪ್ರಸ್ತುತ ರಂಜಾನ್ ಉಪವಾಸ ಆಗಿರುವುದರಿಂದ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಬಂದಿದೆ. ಕೊಯ್ಲಿಗೆ ಬರುತ್ತಿರುವ ದ್ರಾಕ್ಷಿಯನ್ನು ಸ್ಥಳೀಯವಾಗಿ ಅಲ್ಲದೇ ಉತ್ತರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಿಗೆ ರವಾನೆಯಾಗುತ್ತಿದೆ.
ಪ್ರಸ್ತುತ ಅಲ್ಲೊಂದು, ಇಲ್ಲೊಂದು ದ್ರಾಕ್ಷಿ ತೋಟಗಳು ಕೊಯ್ಲಿನ ಕಾರ್ಯ ನಡೆಯುತ್ತಿದ್ದು, ವ್ಯಾಪಾರಸ್ಥರು ದ್ರಾಕ್ಷಿ ತೋಟಗಳತ್ತ ಮುಖ ಮಡುತ್ತಿದ್ದಾರೆ.
ಉತ್ತಮ ಇಳುವರಿ: ಕಳೆದ ಎರಡು ವರ್ಷಗಳಿಂದ ಸುರಿದ ಉತ್ತಮ ಮಳೆಯ ವರದಿಂದ ಈ ಬಾರಿ ದ್ರಾಕ್ಷಿ ಬೆಳೆಗಾರರಿಗೆ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಡಿಸೆಂಬರ್, ಜನವರಿ ತಿಂಗಳಲ್ಲಿ ದ್ರಾಕ್ಷಿ ಗಿಡ ಕಟ್ಟಿಂಗ್ ಮಾಡಿ ಚಾಟ್ನಿ ಮಾಡಿದ ತೋಟಗಳು ಈಗ ಕೊಯ್ಲಿಗೆ ಸಮೀಪಿಸುತ್ತಿದ್ದು ಇಳುವರಿಯೂ ಚೆನ್ನಾಗಿದೆ. ಈ ಸಮಯದಲ್ಲಿ ಬಿರುಗಾಳಿ ಆಲಿಕಲ್ಲು ಮಳೆ ತಪ್ಪಿದ್ದರೆ ಮಾತ್ರ ಉತ್ತಮ ಆದಾಯದ ನಿರೀಕ್ಷಿಸಬಹುದು ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ