ನಾಡು-ನುಡಿಗಾಗಿ ಎಲ್ಲರೂ ಒಗ್ಗೂಡಿ

ಹುಳಿಯಾರು:

                    ಬೆಳಗಾವಿ ಕನ್ನಡನಾಡಿನ ಅವಿಭಾಜ್ಯ ಅಂಗವಾಗಿದ್ದು, ಇಲ್ಲಿನ ಎಲ್ಲಾ ಸೌಕರ್ಯಗಳನ್ನು ಅನುಭವಿಸಿ ಉಂಡ ಮನೆಗೆ ಕನ್ನ ಹಾಕುವ ನೀಚ ಕೃತ್ಯಕ್ಕೆ ಮರಾಠರು ಕೈಹಾಕಿರುವುದು ದುರಂತದ ವಿಷಯ. ಕನ್ನಡದ ನೆಲ ಜಲದ ರಕ್ಷಣೆಗಾಗಿ ಕನ್ನಡಿಗರು ಜಾತಿ, ಧರ್ಮ, ಪಕ್ಷ ಬದಿಗಿತ್ತು ಒಂದಾಗಬೇಕಿದೆ ಎಂದು ಹುಳಿಯಾರು ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್ ತಿಳಿಸಿದ್ದಾರೆ.

ಕನ್ನಡ ಧ್ವಜಕ್ಕೆ ಅಪಮಾನ ಮಾಡಿ, ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಹುಳಿಯಾರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿ ಉಪತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಮಹಾರಾಷ್ಟ್ರದ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಗಳ ಕಾರ್ಯಕರ್ತರು ಕೋಲ್ಹಾಪುರದಲ್ಲಿ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ನಡ ನಾಡಧ್ವಜಕ್ಕೆ ಬೆಂಕಿ ಹತ್ತುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ. ಈ ಮುಖೇನ ನಾಡದ್ರೋಹದ ಕೃತ್ಯ ಎಸಗಿದ್ದಾರೆ. ಅಲ್ಲದೇ ದೇಶದ ಸ್ವಾತಂತ್ರ್ಯಕ್ಕೆ ಬಲಿದಾನ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡುವ ಮೂಲಕ ಮಹಾನ್ ರಾಷ್ಟ್ರಭಕ್ತನನ್ನು ಅವಮಾನಿಸಿರುವುದು ತೀವ್ರ ಖಂಡನೀಯ ಎಂದರು.

ಕನ್ನಡಿಗರ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಪದೇ ಪದೇ ಮಾಡುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ವಾಹನಗಳಿಗೆ ಕಲ್ಲು ತೂರಿದ್ದಾರೆ. ಸಾರ್ವಜನಿಕರ ಅಪಾರ ಆಸ್ತಿಗೆ ನಷ್ಟ ಉಂಟು ಮಾಡಿದ್ದಾರೆ. ಬೆಳಗಾವಿ ಅಧಿವೇಶನಕ್ಕೂ ಅಡ್ಡಿಪಡಿಸಿದ್ದಾರೆ. ಅವರ ಪುಂಡಾಟಿಕೆ ಹೆಚ್ಚಾಗಿದ್ದು, ಗಡಿ ವಿಚಾರದಲ್ಲಿ ದೇಶಭಕ್ತರನ್ನು ಅಡ್ಡ ತಂದು, ಅವರಿಗೆ ಅಪಮಾನ ಮಾಡುವುದು ಸಲ್ಲದು. ಇಂತಹ ಕೃತ್ಯ ಎಸಗುತ್ತಿರುವ ಅನಾಗರೀಕರನ್ನು ಗಡಿಪಾರು ಮಾಡಿ, ಅವರಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಕರವೇ ಗೌರವ ಅಧ್ಯಕ್ಷ ಕ್ಯಾಸೆಟ್‍ರಂಗಸ್ವಾಮಿ, ಮೆಡಿಕಲ್ ಚನ್ನಬಸವಯ್ಯ, ಬೇಕರಿ ಪ್ರಕಾಶ್, ಮಂಜುನಾಥ್, ಪಾತ್ರೆರಘು, ಬಸವರಾಜು, ಗಣೇಶ್, ಸಂತೋಷ್, ಪರಪ್ಪ, ಕುಮಾರ್, ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap