ತುಮಕೂರು : ಬಣಗುಟ್ಟಿದ ಸರ್ಕಾರಿ ಕಛೇರಿಗಳು…!

ತುಮಕೂರು

      ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗ ಹಾಗೂ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಕರೆ ನೀಡಿರುವ ಅನಿರ್ಧಿಷ್ಠಾವಧಿ ಮುಷ್ಕರದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಹೊರ ರೋಗಿಗಳ ವಿಭಾಗ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು ಮಧ್ಯಾಹ್ನದ ವರೆಗೆ ಸಂಪೂರ್ಣ ಬಂದ್ ಆಗಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು.

     ಮುಷ್ಕರದ ಅರಿವಿಲ್ಲದೆ ದೂರದ ಊರುಗಳಿಂದ ಚಿಕಿತ್ಸೆಗಾಗಿ ಬಂದು ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ, ಸೇವೆಗಳಿಲ್ಲದೆ ಸಾರ್ವಜನಿಕರು, ವಯೋ ವೃದ್ಧರು, ಅಂಗವಿಕರು ಮೊದಲಾದ ಬಡ ರೋಗಿಗಳು ಇತ್ತ ಚಿಕಿತ್ಸೆಯೂ ಇಲ್ಲದೇ ಅತ್ತ ಖಾಸಗಿ ಆಸ್ಪತ್ರೆಗಳಿಗೂ ಹೋಗಲಾರದೇ ಪರಿತಪಿಸುತ್ತಿದ್ದ ದೃಶ್ಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಂಡು ಬಂತು.

    ಅಗತ್ಯ ಚಿಕಿತ್ಸೆ ಪಡೆದು ಊರುಗಳತ್ತ ಮರಳಬೇಕು ಎಂಬ ಆಶಾ ಭಾವನೆಯಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದ ಬಡ ರೋಗಿಗಳ ಮುಖದಲ್ಲಿ ಚಿಕಿತ್ಸೆ ಸಿಗುವುದಿಲ್ಲ ಎಂಬ ವಿಚಾರ ಅವರಲ್ಲಿ ದುಗುಡ, ಆತಂಕಕ್ಕೆ ಕಾರಣವಾಗಿತ್ತು. ಆಸ್ಪತ್ರೆಯ ಹೊರಾಂಡ ಮತ್ತು ಒಳಗೆ ಅಲ್ಲಲ್ಲಿ ವಯೋವೃದ್ಧ, ಅಂಗವಿಕಲ ರೋಗಿಗಳು ಚಿಕಿತ್ಸೆ ಇಲ್ಲದೆ ನಿತ್ರಾಣಗೊಂಡು ಮಲಗಿದ್ದ, ಕುಳಿತಿದ್ದ ದೃಶ್ಯಗಳು ಕರುಳು ಹಿಂಡುವಂತಿದ್ದವು.

      ರಾಜ್ಯ ಸರ್ಕಾರ ನೌಕರರಿಗೆ ಶೇ.17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶದ ಹೊರಡಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ಸರ್ಕಾರಿ ನೌಕರರ ಸಂಘ ತನ್ನ ಮುಷ್ಕರವನ್ನು ಹಿಂಪಡೆದಿದ್ದರಿಂದ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾದರು.

    ಸಂಘದ ಕರೆ ಮೇರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ದೂರದ ಹಳ್ಳಿಗಳಿಂದ ನಗರ, ಪಟ್ಟಣ ಪ್ರದೇಶಗಳಿಗೆ ಬಂದಿರುವ ರೈತರು, ಸಾರ್ವಜನಿಕರು ಚಿಕಿತ್ಸೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಇತರೆ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಬಂದಿದ್ದರೂ ಸಹ ಹೊರ ರೋಗಗಿಳ ವಿಭಾಗವನ್ನು ತೆರೆಯದೆ ಬಂದ್ ಮಾಡಿದ್ದು, ತುರ್ತು ಸೇವೆಗಳಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಮಾತ್ರ ಸರ್ಕಾರಿ ವೈದ್ಯರು ತೀರ್ಮಾನಿಸಿರುವುದರಿಂದ ಹೊರ ರೋಗಿಗಳು ಚಿಕಿತ್ಸೆ ಸಿಗದೆ ತಮ್ಮ ತಮ್ಮ ಊರುಗಳತ್ತ ತೆರಳಿದರು.

     ಜಿಲ್ಲೆಯ ಸರ್ಕಾರಿ ಶಾಲಾ-ಕಾಲೇಜುಗಳು, ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನೌಕರರು ಕರ್ತವ್ಯ ಹಾಜರಾಗದೇ ತಮ್ಮ ಮುಷ್ಕರ ನಡೆಸಿದರು. ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಹೊರ ಗುತ್ತಿಗೆ ನೌಕರರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದು, ಉಳಿದಂತೆ ಸರ್ಕಾರಿ ನೌಕರರು ಕಚೇರಿ ಬಳಿಗೆ ಬಂದರೂ ಸಹ ಕಚೇರಿ ಒಳಗೆ ಹೋಗದೆ ಪ್ರತಿಭಟನೆ ನಡೆಸಿದ್ದು ಜಿಲ್ಲೆಯಾದ್ಯಂತ ಕಂಡು ಬಂತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap