ಬೆಂಗಳೂರು:
ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಜು.27ಕ್ಕೆ ಸರ್ವಪಕ್ಷ ಸಭೆ ನಡೆಸಲು ಮುಂದಾಗಿದೆ.
ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೆ.ಸಿ.ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರ ನೀಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ರಸ್ತೆ ಗುಂಡಿ, ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ.
ಇವುಗಳ ಪರಿಹಾರಕ್ಕೆ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಇನ್ನಷ್ಟು ರಸ್ತೆಗಳಿಗೆ ವೈಟ್‌ಟಾಪಿಂಗ್, ಸುರಂಗ ಮಾರ್ಗ ನಿರ್ಮಾಣ, ರಸ್ತೆ ಅಗಲೀಕರಣ, ಇಂಟಿಗ್ರೇಟೆಡ್ ಮೆಟ್ರೋ ರೋಡ್ ಪ್ಲೈ ಓವರ್ ಸೇರಿದಂತೆ ಬಿಬಿಎಂಪಿಯಿಂದ ರೂ.00 ಕೋಟಿ ಮತ್ತು ಸರ್ಕಾರದಿಂದ ರೂ.1660 ಕೋಟಿ ಮೊತ್ತದ ಹಲವು ಕಾಮಗಾರಿಗಳನ್ನು ರೂಪಿಸಲಾಗಿದೆ. ಸ್ಪೀಕರ್ ಅನುಮತಿ ಕೊಟ್ಟರೆ ಇವುಗಳ ಬಗ್ಗೆ ಈ ಸದನದಲ್ಲೇ ಒಂದು ಇಡೀ ದಿನ ಚರ್ಚಿಸೋಣ. ಅಥವಾ ಸದನ ಮುಗಿದ ಬಳಿಕ ಒಂದು ಸಭೆ ಕರೆಯುತ್ತೇನೆ. ಸಮಗ್ರವಾಗಿ ಚರ್ಚಿಸೋಣ. ನಗರದ ಎಲ್ಲಾ ಶಾಸಕರೂ ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡಿ ಎಂದು ಹೇಳಿದರು. ಇದಕ್ಕೆ ಸ್ಪೀಕರ್ ನೀವು ಸದನದ ಹೊರಗೇ ಈ ಬಗ್ಗೆ ಸಭೆ ಕರೆಯುವುದು ಸೂಕ್ತ ಎಂದರು.
ಇದಕ್ಕೆ ಉತ್ತರಿಸಿದ ಡಿಸಿಎಂ, ಅಶೋಕ್, ಸುರೇಶ್ ಕುಮಾರ್ ಹಾಗೂ ರಾಮಮೂರ್ತಿ ಅವರ ಮಾತಿಗೆ ನನ್ನ ಸಹಮತವಿದೆ. ಕಳೆದ ಒಂದು ವರ್ಷದಿಂದ ಸಮನ್ವಯತೆ ಸಾಧಿಸಲು ನಾನೇ ಸಾಕಷ್ಟು ಕಸರತ್ತು ನಡೆಸಿದ್ದೇನೆ. ಇದರಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಆದರೆ, ಒಂದು ಹಂತಕ್ಕೆ ಸಮಸ್ಯೆ ನಿವಾರಣೆ ಮಾಡಿದ್ದೇನೆ. ಪ್ರಯತ್ನ ಮುಂದುವರೆಸಿದ್ದೇನೆ. ಪ್ರತಿಪಕ್ಷದವರು ಸಹಕಾರ ನೀಡಿದರೆ ಕಸ ವಿಲೇವಾರಿ, ಕುಡಿಯುವ ನೀರು, ಸಂಚಾರ ದಟ್ಟಣೆ, ಬೀದಿ ದೀಪ, ತೆರಿಗೆ ಸಂಗ್ರಹ, ಹಸಿರೀಕರಣ – ಹೀಗೆ ಅನೇಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಬಹುದು. ಇದಕ್ಕಾಗಿ ಅಧಿವೇಶನ ಮುಗಿದ ಮರುದಿನ ಜು.27ರಂದು ಸರ್ವ ಪಕ್ಷ ಶಾಸಕರ ಸಭೆ ಕರೆಯುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕೆ.ಸಿ.ರಾಮಮೂರ್ತಿ, ಸರ್ಕಾರ ಬ್ರ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ಈ ಸದನಕ್ಕೆ ಸರಿಯಾದ ಮಾಹಿತಿ ನೀಡಬೇಕು. ಬಹಳಷ್ಟು ಸದಸ್ಯರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಈ ಯೋಜನೆಯಡಿ ಕಾಮಗಾರಿ ಕೈಗೊಳ್ಳುವಲ್ಲಿಯೂ ತಾರತಮ್ಯ ಆಗುತ್ತಿದೆ. ಕೇವಲ ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯಿಂದ ಮಾತ್ರ ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಸಾಧ್ಯವಿಲ್ಲ. ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನೂ ಪರಿಹರಿಸಿದಾಗಲೇ ಈ ಯೋಜನೆಗೆ ಅರ್ಥ ಬರುವುದು ಎನ್ನುವುದನ್ನು ಮನಗಂಡು ಕಾಮಗಾರಿಗಳ ಹಂಚಿಕೆ ಮಾಡಬೇಕು ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಅಶೋಕ್ ಮಾತನಾಡಿ, ನಿಮಗೆ ಬೇಕಾದವರಿಗೆ ಅನುದಾನ ಕೊಡುವುದನ್ನು ಬ್ರ್ಯಾಂಡ್ ಬೆಂಗಳೂರು ಅನ್ನಲಾಗಲ್ಲ. ಕಳೆದ 15 ವರ್ಷಗಳ ದಾಖಲೆ ತೆಗೆಯಿರಿ ಬಿಜೆಪಿ ಆಡಳಿತದಲ್ಲಿ ಕಾಂಗ್ರೆಸ್ ಸದಸ್ಯರಿಗೆ ಎಷ್ಟು ಅನುದಾನ ಕೊಡಲಾಗಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಿ. ಬೆಂಗಳೂರಿನಲ್ಲಿ 16 ಜನ ಬಿಜೆಪಿ ಶಾಸಕರೂ ಇದ್ದಾರೆ. ನಾವು ನಮ್ಮ ಆಡಳಿತದಲ್ಲಿ ನಿಮ್ಮ ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಟ್ಟಿದ್ದರೆ ನಮಗೂ ಕೊಡಿ. ತಾರತಮ್ಯ ಮಾಡಬೇಡಿ ಎಂದರು.
ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಮಾತನಾಡಿ, ಬೆಂಗಳೂರಿನ ವಿವಿಧ ನಾಗರಿಕ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲ. ಒಂದು ಇಲಾಖೆ ರಸ್ತೆಯನ್ನು ಮಾಡಿದರೆ, ಇನ್ನೊಂದು ಇಲಾಖೆ ಪೈಪ್ ಹಾಕಲು ಅಗೆಯುತ್ತದೆ. ಈ ಸಮಸ್ಯೆ ಬಹಳ ಹಿಂದಿನಿಂದಲೂ ಇದೆ. ಇದನ್ನು ಪರಿಹರಿಸಲು, ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಡಿಎ, ಬೆಸ್ಕಾಂ ಮತ್ತು ಇತರ ನಾಗರಿಕ ಏಜೆನ್ಸಿಗಳ ಅಧಿಕಾರಿಗಳೊಂದಿಗೆ ವಿಧಾನಸಭೆ ಮಟ್ಟದಲ್ಲಿ ಕಾರ್ಯಪಡೆಯನ್ನು ಮತ್ತು ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಕಾರ್ಯಪಡೆಯನ್ನು ರಚಿಸಿ ಎಂದು ಹೇಳಿದರು.