ನವೀ ಮುಂಬೈ:
ತರಬೇತಿ ಅವಧಿಯಲ್ಲಿ ಗಾಯಗೊಂಡರು ಮಹಿಳಾ ವಿಶ್ವಕಪ್ನ ಎರಡು ಲೀಗ್ ಪಂದ್ಯಗಳಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ ಸಂಪೂರ್ಣ ಗುಣಮಖರಾಗಿದ್ದು, ಗುರುವಾರ ನಡೆಯುವ ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸೆಮಿ ಪಂದ್ಯದಲ್ಲಿ ಅವರು ಆಡುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಡಿಸಿದೆ.
ಹೀಲಿ ಅದ್ಭುತ ಫಾರ್ಮ್ನಲ್ಲಿದ್ದು, ಲೀಗ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ಸತತ ಶತಕಗಳನ್ನು ಗಳಿಸಿದ್ದರು. ಸದ್ಯ ಅಜೇಯವಾಗಿರುವ ಆಸ್ಟ್ರೇಲಿಯಾವನ್ನು ಹರ್ಮನ್ಪ್ರೀತ್ ಕೌರ್ ಪಡೆ ಮಣಿಸಿದರೆ ಫೈನಲ್ನಲ್ಲಿಯೂ ಭಾರತ ಗೆಲ್ಲುವುದು ಖಚಿತ ಎನ್ನಲಡ್ಡಿಯಿಲ್ಲ.
“ಭಾರತ ವಿರುದ್ಧದ ಐಸಿಸಿ ಮಹಿಳಾ ವಿಶ್ವಕಪ್ 2025 ರ ಸೆಮಿಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ ತೀವ್ರವಾಗಿ ತರಬೇತಿ ಪಡೆದರು” ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ.
“ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಅವರು ಪೂರ್ಣ ನೆಟ್ ಸೆಷನ್ ಕೈಗೊಳ್ಳುವ ಮೊದಲು ವಿಕೆಟ್ ಕೀಪಿಂಗ್ ವ್ಯಾಯಾಮಗಳಲ್ಲಿ ಭಾಗವಹಿಸಿದರು, ಅದರ ಉತ್ತರಾರ್ಧದಲ್ಲಿ ಅವರು ನೆಟ್ ಬೌಲರ್ಗಳ ವಿರುದ್ಧ ದೊಡ್ಡ ಪ್ರದರ್ಶನ ನೀಡುತ್ತಿರುವುದು ಕಂಡುಬಂದಿತು” ಎಂದು ಐಸಿಸಿ ಹೇಳಿದೆ. ಆಸ್ಟ್ರೇಲಿಯಾದ ಮುಖ್ಯ ಕೋಚ್ ಶೆಲ್ಲಿ ನಿಟ್ಷ್ಕೆ, ಸೆಮಿಫೈನಲ್ಗೆ ಹೀಲಿ ಸೂಕ್ತ ಸಮಯಕ್ಕೆ ಹೊಂದಿಕೊಳ್ಳುತ್ತಾರೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದರು.
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು, ಚಂಡಮಾರುತ ಸ್ವರೂಪ ಪಡೆದುಕೊಂಡ ಕಾರಣ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಸೆಮಿ ಪಂದ್ಯಕ್ಕೆ ಮಳೆ ಭೀತಿಯೂ ಇದೆ. ಸೆಮಿಫೈನಲ್ ಪಂದ್ಯ ಒಂದು ವೇಳೆ ಮಳೆಯಿಂದ ಪೂರ್ಣಗೊಳ್ಳದಿದ್ದರೆ, ಪಂದ್ಯವನ್ನು ಮುಂದಿನ ದಿನಕ್ಕೆ (ರಿಸರ್ವ್ ಡೇ) ಮುಂದೂಡಲಾಗುತ್ತದೆ. ಎರಡನೇ ದಿನಗಳಲ್ಲಿ ಪಂದ್ಯ ಫಲಿತಾಂಶ ಕಾಣದಿದ್ದರೆ, ಲೀಗ್ನ ಅಂಕಗಳ ಆಧಾರದ ಮೇಲೆ ವಿಜೇತ ತಂಡವನ್ನು ನಿರ್ಧರಿಸಲಾಗುತ್ತದೆ. ಹೀಗಾದರೆ ಆಸ್ಟ್ರೇಲಿಯಾ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಆಸೀಸ್ ತಂಡ ಲೀಗ್ನಲ್ಲಿ ಅಗ್ರಸ್ಥಾನ ಪಡೆದಿತ್ತು. ಭಾರತ ನಾಲ್ಕನೇ ಸ್ಥಾನ ಪಡೆದಿದೆ.








