ನವದೆಹಲಿ :
ಬ್ರೆಜಿಲ್ , ದಕ್ಷಿಣ ಅಮೇರಿಕಾ ಸೇರಿ ಕೆಲ ಕಡೆ ಬರ ಪರಿಸ್ಥಿತಿ ಭೀಕರವಾಗಿದೆ. ಬರ ಉಂಟಾದಾಗ ಮೊದಲು ಜಲ ಮೂಲಗಳು ಬತ್ತಿ ಹೋಗುತ್ತವೆ, ಅಲ್ಲಿನ ಜನ ಹನಿ ನೀರಿಗೂ ಒದ್ದಾಡುತ್ತಾರೆ. ಈಗ ಇಂತಹದ್ದೇ ಒಂದು ಬರ ಪರಿಸ್ಥಿತಿಯನ್ನು ಮತ್ತೊಂದು ನದಿ ಎದುರಿಸುತ್ತಿದೆ.
ಈ ನದಿ ಹೆಸರು ಕೇಳಿದರೆ ನಿಮಗೆ ಅಚ್ಚರಿ ಆಗ್ಬಹುದು. ಆದರೆ ಪ್ರಕೃತಿ ಮುಂದೆ ಯಾರ ಆಟವೂ ನಡೆಯಲ್ಲ ಎನ್ನುವುದಕ್ಕೆ ಈ ಬರ ಪರಿಸ್ಥಿತಿ ಸಾಕ್ಷಿಯಾಗಿದೆ.
ವಿಶ್ವದ ಅತಿದೊಡ್ಡ ನದಿ ಅನ್ನೋ ಹೆಗ್ಗಳಿಕೆ ಪಡೆದಿರುವ ಅಮೆಜಾನ್ ನದಿ ಬರಿದಾಗ್ತಿದೆ. ಅಮೆಜಾನ್ ನದಿಯ ಜಲಾನಯನ ಪ್ರದೇಶವು ಅತ್ಯಂತ ಕೆಟ್ಟ ಬರವನ್ನು ಅನುಭವಿಸುತ್ತಿದ್ದು, ಎಂದೂ ಕಂಡು ಕೇಳರಿಯದ ರೀತಿಯಲ್ಲಿ ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ. ಈ ಪರಿಸರದ ಬಿಕ್ಕಟ್ಟು ವನ್ಯಜೀವಿಗಳು ಮತ್ತು ಸ್ಥಳೀಯ ಸಮುದಾಯಗಳ ಮೇಲೆ ವ್ಯಾಪಕವಾದ ಪರಿಣಾಮ ಬೀರುತ್ತಿದೆ ಮತ್ತು ಹವಾಮಾನ ಬದಲಾವಣೆಯ ವೇಗವರ್ಧಿತ ಪರಿಣಾಮಗಳ ಬಗ್ಗೆ ವಿಶ್ವಕ್ಕೆ ಎಚ್ಚರಿಕೆ ಗಂಟೆಯಾಗಿದೆ.
ಪೆರುವಿನ ಆಂಡಿಸ್ ಪರ್ವತಗಳಿಂದ ಪೂರ್ವಕ್ಕೆ ದಕ್ಷಿಣ ಅಮೇರಿಕಾದಾದ್ಯಂತ ಅಟ್ಲಾಂಟಿಕ್ ಸಾಗರದವರೆಗೆ ಹರಿಯುವ ಅಮೆಜಾನ್ ನದಿಯು ಸಮುದ್ರ ಮಟ್ಟದಿಂದ 5,598 ಮೀಟರ್ಗಳಷ್ಟು ಎತ್ತರದಲ್ಲಿದೆ. ಋತುಮಾನದೊಂದಿಗೆ ನದಿಯ ಗಾತ್ರವು ಬದಲಾಗುತ್ತದೆ. ಉದಾಹರಣೆಗೆ ಶುಷ್ಕ ಋತುವಿನಲ್ಲಿ, ನದಿಯು 4 ರಿಂದ 5 ಕಿಮೀ ಅಗಲವನ್ನು ವ್ಯಾಪಿಸಿದರೆ, ಆರ್ದ್ರ ಋತುವಿನಲ್ಲಿ, ಇದು 50 ಕಿ.ಮೀ. ಅಗಲವಿರುತ್ತದೆ.
ಅಮೆಜಾನ್ನ ಉಪನದಿಗಳಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಅಮೆಜಾನ್ನ ಪ್ರಮುಖ ಉಪನದಿಯಾದ ಮಡೈರಾ ನದಿ, ಕೊಲಂಬಿಯಾದೊಂದಿಗೆ ಬ್ರೆಜಿಲ್ನ ಗಡಿಯಲ್ಲಿರುವ ತಬಾಟಿಂಗಾದಲ್ಲಿ ಸೊಲಿಮೆಸ್ ನದಿ ಈಗಾಗ್ಲೆ ಬತ್ತಿ ಹೋಗಿರುವ ಬಗ್ಗೆ ಜಿಲಿಯನ್ ಭೂವೈಜ್ಞಾನಿಕ ಸೇವೆ ವರದಿ ಮಾಡಿದೆ. ಸೊಲಿಮೋಸ್ ನದಿಯು ದಾಖಲೆಯ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದೆ, ಸೊಲಿಮೋಸ್ನ ಒಂದು ಭಾಗವು ಸಂಪೂರ್ಣವಾಗಿ ಒಣಗಿಹೋಗಿದೆ. ಸತತ ಎರಡನೇ ಬಾರಿಗೆ ಅಮೆಜಾನ್ ನದಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ವರ್ಷವೂ ಇಲ್ಲಿ ಬರ ಎದುರಾಗಿತ್ತು.
ಬ್ರೆಜಿಲ್ನ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಸಂಸ್ಥೆ ಸೆಮಾಡೆನ್ ಪ್ರಸ್ತುತ ಬರವನ್ನು ಇದುವರೆಗೆ ದಾಖಲಿಸಿದ ‘ಅತ್ಯಂತ ತೀವ್ರ ಮತ್ತು ವ್ಯಾಪಕ’ ಬರ ಎಂದು ವಿವರಿಸಿದೆ. ಗ್ರೀನ್ಪೀಸ್ ವಕ್ತಾರ ರೊಮುಲೊ ಬಟಿಸ್ಟಾ ಈ ವರ್ಷದ ಬರಗಾಲದ ನಿರ್ಣಾಯಕ ಸ್ವರೂಪವನ್ನು ಒತ್ತಿಹೇಳಿದರು. ಕಳೆದ ವರ್ಷಕ್ಕಿಂತ ಈ ವರ್ಷ ಬರ ಪರಿಸ್ಥಿತಿ ಕೆಟ್ಟದಾಗಿದೆ, ಬರಗಾಲದ ಪರಿಣಾಮಗಳು ನದಿಗಳ ಆಚೆಗೆ ವಿಸ್ತರಿಸುತ್ತವೆ, ಬ್ರೆಜಿಲ್ನಾದ್ಯಂತ ಮರಗಿಡಗಳು ನೀರಿಲ್ಲದೇ ಒಣಗಿ ಹೋಗಿವೆ.
ಇಲ್ಲಿನ ಪ್ರಮುಖ ಕೃಷಿ ಕಾಫಿಯ ಮೇಲೂ ಕೆಟ್ಟ ಪರಿಣಾಮ ಉಂಟಾಗಿದೆ. ದಕ್ಷಿಣ ಅಮೆರಿಕಾದ ನಗರಗಳಲ್ಲಿ ಕಾಳ್ಗಿಚ್ಚು ಅಲ್ಲಲ್ಲಿ ಉಂಟಾಗುತ್ತಿದೆ ಎಂದು ತಿಳಿಸಿದರು. ಅಮೆಜಾನ್ನ ಅತಿದೊಡ್ಡ ನಗರವಾದ ಮನೌಸ್ನಲ್ಲಿ ಬರಗಾಲ ತಾಂಡವವಾಡುತ್ತಿದೆ. ನೀರಿನ ಮಟ್ಟವು ಕಳೆದ ವರ್ಷ ಅಕ್ಟೋಬರ್ಗಿಂತ ದಾಖಲೆಯ ಕಡಿಮೆ ಮಟ್ಟವನ್ನು ತಲುಪುತ್ತಿದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿ ಹದಗೆಟ್ಟಿದೆ ಎಂದು ವರದಿಗಳು ತಿಳಿಸಿವೆ.
ಈ ಪರಿಸರ ಬಿಕ್ಕಟ್ಟು ಬರ ಮತ್ತು ಜಾಗತಿಕ ತಾಪಮಾನದ ನಡುವಿನ ಸಂಪರ್ಕಗಳನ್ನು ಎತ್ತಿ ತೋರಿಸುತ್ತಿದೆ. ಅಲ್ಲದೇ ಅಮೆಜಾನ್ ಬರಗಳ ಮತ್ತೊಂದು ಅಂಶವೆಂದರೆ ಅರಣ್ಯನಾಶ. ಕಳೆದ 50 ವರ್ಷಗಳಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಮಳೆಕಾಡುಗಳು ನಾಶವಾಗಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಸತತ ಎರಡನೇ ವರ್ಷವೂ ಬರ ಎದುರಿಸುತ್ತಿರುವ ಅಮೆಜಾನ್ ಜಲಾನಯನ ಪ್ರದೇಶವು, ಅಲ್ಲಿನ ಪರಿಸರ ವ್ಯವಸ್ಥೆ, ಜೀವವೈವಿಧ್ಯ ಮತ್ತು ಈ ಪ್ರಮುಖ ಜಲಮಾರ್ಗಗಳನ್ನು ಅವಲಂಬಿಸಿರುವ ಸಮುದಾಯಗಳಿಗೆ ದಿಕ್ಕು ತೋಚದಂತೆ ಮಾಡಿದೆ.
