ನವದೆಹಲಿ
ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಇಂದು. ದೇಶ ವಿದೇಶಗಳಿಂದ ಬಹಳಷ್ಟು ಜನರು ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದಲ್ಲಿ ಉದ್ಯಮ ವಲಯ ಹುಲುಸಾಗಿ ಬೆಳೆಯುತ್ತಿದೆ. ಅಂತೆಯೇ ಹಲವು ಉದ್ಯಮಿಗಳು ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿದ್ದಾರೆ. ಮುಕೇಶ್ ಅಂಬಾನಿ ಅವರು ಮೋದಿಯನ್ನು ಅವತಾರ ಪುರುಷ ಎಂದೂ ಬಣ್ಣಿಸಿದ್ದಾರೆ.
‘ಭಾರತದ ಅಮೃತ ಘಳಿಗೆಯಲ್ಲಿ ನರೇಂದ್ರ ಮೋದಿ ಅವರ ಅಮೃತ ಮಹೋತ್ಸವ ಬಂದಿರುವುದು ಕಾಕತಾಳೀಯ ಅಲ್ಲ. ಭಾರತವನ್ನು ಈ ಭೂಮಿಯ ಸರ್ವಶ್ರೇಷ್ಠ ದೇಶವನ್ನಾಗಿ ಮಾಡಲು ಆ ದೇವರೇ ಮೋದಿಯವರನ್ನು ಅವತಾರ ಪುರುಷರನ್ನಾಗಿ ಮಾಡಿ ಕಳುಹಿಸಿದ್ದಾನೆ. ಅವರ ಜನ್ಮದಿನವನ್ನು ಉತ್ಸವವಾಗಿ ಆಚರಿಸಬೇಕು’ ಎಂದು ಮುಕೇಶ್ ಅಂಬಾನಿ ಹೊಗಳಿದ್ದಾರೆ. ‘ಮೂರು ದಶಕಗಳಿಗೂ ಹೆಚ್ಚು ಕಾಲ ಅವರೊಂದಿಗೆ ನಿಕಟವಾಗಿರುವುದು ನನ್ನ ಸೌಭಾಗ್ಯ. ದೇಶದ ಏಳ್ಗೆಗಾಗಿ ಇಷ್ಟು ದಣಿವರಿಯದೆ ಕೆಲಸ ಮಾಡಿದ ಇನ್ನೊಬ್ಬ ನಾಯಕನನ್ನು ನಾನು ನೋಡಿಯೇ ಇಲ್ಲ’ ಎಂದೂ ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಹೇಳಿದ್ದಾರೆ.
‘ಭಾರತದ ಬಗ್ಗೆ ನಿಮಗಿರುವ ಪ್ರೀತಿ ಮತ್ತು ದೇಶದ ಘನತೆ ಹೆಚ್ಚಿಸಲು ನಿಮಗಿರುವ ಬದ್ಧತೆ ಬಗ್ಗೆ ಯಾವ ಸಂದೇಹವೂ ಇಲ್ಲ. ನಿಮ್ಮ ಅವಿರತ ಶ್ರಮ ಪ್ರತಿಯೊಬ್ಬ ಭಾರತೀಯನಿಗೂ ಕಾಣುತ್ತಿದೆ’ ಎಂದು ಮಹೀಂದ್ರ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರ ಅಭಿಪ್ರಾಯಪಟ್ಟಿದ್ದಾರೆ.
‘ನರೇಂದ್ರ ಮೋದಿ ಅವರು ಸದಾ ಕಾಲ ಕೆಲಸ ಮಾಡುತ್ತಲೇ ಇರುತ್ತಾರೆ, ದೇಶದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಅಪಾರ ಬುದ್ಧಿಮತ್ತೆ ಮತ್ತು ಅದ್ಭುತ ದೃಷ್ಟಿಕೋನದ ಜೊತೆಗೆ ನಿಸ್ವಾರ್ಥ ಗುಣ ಮೇಳೈಸಿರುವ ವ್ಯಕ್ತಿತ್ವ ಮೋದಿಯವರದ್ದು’ ಎಂದು ಆರ್ಪಿಜಿ ಗ್ರೂಪ್ನ ಸಂಜೀವ್ ಗೋಯಂಕಾ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ. ಭಾರತದ ಅಭಿವೃದ್ಧಿ ಬಗ್ಗೆ ಅವರಿಗಿರುವ ಬದ್ಧತೆಗೆ ಸರಿಸಾಟಿ ಇಲ್ಲ ಎಂದು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ತಿಳಿಸಿದ್ದಾರೆ. ಮೋದಿ ಜೊತೆಗಿನ ಪ್ರತೀ ಮಾತುಕತೆಯೂ ಕಲಿಕೆಯ ಅನುಭವ ಕೊಡುತ್ತದೆ. ಹೊಸದನ್ನು ಅನ್ವೇಷಿಸುವ ಕುತೂಹಲ, ಕಾರ್ಯಗತಗೊಳಸುವ ದೃಷ್ಟಿಕೋನ ನಿಜಕ್ಕೂ ಪ್ರಶಂಸನೀಯ. ಜಪಾನ್ಗೆ ಹೋದಾಗ ಬ್ರೇಲ್ ಟೈಲ್ಸ್ನಂತಹ ಐಡಿಯಾಗಳನ್ನು ತಲೆಯಲ್ಲಿ ಇಟ್ಟುಕೊಂಡು ಬಂದು ಅಹ್ಮದಾಬಾದ್ನಲ್ಲಿ ಅದನ್ನು ಜಾರಿಗೆ ತಂದಿದ್ದರು ಎಂದು ಕೋಟಕ್ ಮಹೀಂದ್ರ ಬ್ಯಾಂಕ್ನ ಉದಯ್ ಕೋಟಕ್ ಸ್ಮರಿಸಿದ್ದಾರೆ.








