ಹೈದರಾಬಾದ್:
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
33ರ ಹರೆಯದ ಅರೆಕಾಲಿಕ ಬೌಲರ್ ಆಗಿರುವ ರಾಯುಡು, ವಿಶ್ವಕಪ್ ಆರಂಭಕ್ಕೆ ಮೊದಲು ಭಾರತೀಯ ಕ್ರಿಕೆಟ್ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಐಪಿಎಲ್ ಟೂರ್ನಿಯಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
2013ರಲ್ಲಿ ಝಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟಿಗೆ ಕಾಲಿಟ್ಟಿರುವ ರಾಯುಡು 55 ಏಕದಿನ ಪಂದ್ಯಗಳ 50 ಇನಿಂಗ್ಸ್‌ಗಳಲ್ಲಿ 47.05ರ ಸರಾಸರಿಯಲ್ಲಿ ಒಟ್ಟು 1,694 ರನ್ ಗಳಿಸಿದ್ದು, ಇದರಲ್ಲಿ ಮೂರು ಶತಕ ಹಾಗೂ 10 ಅರ್ಧಶತಕಗಳಿವೆ. ಔಟಾಗದೆ 124 ಗರಿಷ್ಠ ವೈಯಕ್ತಿಕ ಸ್ಕೋರ್. ಟಿ-20 ಕ್ರಿಕೆಟ್‌ನಲ್ಲಿ 5 ಇನಿಂಗ್ಸ್‌ಗಳಲ್ಲಿ ಆಡಿರುವ ಅವರು 42 ರನ್ ಗಳಿಸಿದ್ದರು. 2019ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ದ ಕೊನೆಯ ಏಕದಿನ ಪಂದ್ಯ ಆಡಿದ್ದರು.
ಹೆಬ್ಬೆರಳ ಗಾಯದಿಂದಾಗಿ ಶಿಖರ್ ಧವನ್ ಟೂರ್ನಿಯಿಂದ ಹೊರ ನಡೆದಾಗ ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್ ರಿಷಭ್ ಪಂತ್‌ರನ್ನು ಇಂಗ್ಲೆಂಡ್‌ಗೆ ಕರೆಸಿಕೊಂಡಿತ್ತು. ಇದೀಗ ಆಲ್‌ರೌಂಡರ್ ವಿಜಯ ಶಂಕರ್ ಕಾಲ್ಬೆರಳ ಮೂಳೆ ಮುರಿತಕ್ಕೊಳಗಾಗಿ ಟೂರ್ನಿಯಿಂದ ಹೊರಗುಳಿದಾಗ ಕನ್ನಡಿಗ ಮಾಯಾಂಕ್ ಅಗರ್ವಾಲ್‌ಗೆ ಕರೆ ನೀಡಲಾಗಿದೆ.
ವಿಶ್ವಕಪ್‌ನ ನಲ್ಲಿ ಭಾರತದ ಇಬ್ಬರು ಆಟಗಾರರು ಗಾಯಗೊಂಡಿದ್ದರೂ ತನಗೆ ಅವಕಾಶ ಲಭಿಸದ ಕಾರಣ ಬೇಸರಗೊಂಡಿರುವ ರಾಯುಡು ನಿವೃತ್ತಿ ಘೋಷಿಸುತ್ತಿದ್ದಾರೆ ಎನ್ನಲಾಗಿದ್ದು, ರಾಯುಡು ತನ್ನ ನಿವೃತ್ತಿಗೆ ನಿಜವಾದ ಕಾರಣವೇನೆಂದು ತಿಳಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ