ಮುಂಬಯಿ:
ಭಾರತ ಕ್ರಿಕೆಟ್ ತಂಡದ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಅವರು ಕಳೆದ ಕೆಲ ದಿನಗಳಿಂದ ಆರ್‌ಸಿಬಿ(RCB) ತಂಡವನ್ನು ಟೀಕೆ ಮಾಡುತ್ತಿದ್ದಾರೆ. ನೇರಪ್ರಸಾರ ಕಾರ್ಯಕ್ರಮದಲ್ಲಿ ಆರ್‌ಸಿಬಿ ತಂಡವು ಇದುವರೆಗೆ ಕಪ್ ಗೆಲ್ಲದೆ ಇರುವುದನ್ನು ಆಡಿಕೊಳ್ಳುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಕಾಮೆಂಟ್ರಿ ವೇಳೆಯೂ ಆರ್‌ಸಿಬಿಯನ್ನು ಗೇಲಿ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಸ್ಟಾರ್ ಸ್ಪೋರ್ಟ್ಸ್ ಹಿಂದಿ ಕಾಮೆಂಟ್ರಿ ಮಾಡುತ್ತಿದ್ದ ವೇಳೆ ಐಪಿಎಲ್ ಇನ್ನೇನು ಹತ್ತಿರ ಬಂತು ಈ ಬಾರಿ ಯಾರು ಚಾಂಪಿಯನ್ ಆಗುತ್ತಾರೆ, ಯಾವ ತಂಡ ಯಾವ ರೀತಿ ಪ್ರದರ್ಶನ ನೀಡಬಹುದು, ಆರ್‌ಸಿಬಿ ಬಗ್ಗೆ ಒಂದೆಡರು ಮಾತಗಳನ್ನಾಡಿ ಎಂದು ಆರ್‌ಸಿಬಿಯ ಮಾಜಿ ಕೋಚ್ ಸಂಜಯ್ ಬಂಗಾರ್(Sanjay Bangar) ಬಳಿ ಅಭಿಪ್ರಾಯ ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಸಂಜಯ್ ಬಂಗಾರ್, ಈ ಸಾರಿ ಆರ್‌ಸಿಬಿ ಪ್ರದರ್ಶನ ಸುಧಾರಿಸಬಹುದು. ಏಕೆಂದರೆ ಕಳೆದ ನಾಲ್ಕು ವರ್ಷಗಳಿಂದ ಆರ್‌ಸಿಬಿ ಪ್ಲೇ ಆಪ್ ಪ್ರವೇಶಿಸಿತ್ತು. ಅದರಲ್ಲೂ ಕಳೆದ ಆವೃತ್ತಿಯಲ್ಲಿ ಸತತ 7 ಪಂದ್ಯ ಸೋತು ಆ ಬಳಿಕದ ಎಲ್ಲ 7 ಪಂದ್ಯವನ್ನು ಗೆದ್ದು ಎಲಿಮಿನೇಟರ್ ತನಕ ಸಾಗಿತ್ತು. ಈ ಬಾರಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದರು.
ಈ ವೇಳೆ ಶಿವ ಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಎಂಬ ಗಾದೆ ಮಾತಿನಂತೆ ಮಧ್ಯ ಪ್ರವೇಶಿಸಿದ ರಾಯುಡು ಹೌದು ಹೌದು. ಈ ಬಾರಿ ಎರಡನೇ ಕ್ವಾಲಿಫೈಯರ್ ಆಡಬಹುದು ಎಂದು ನಗುತ್ತಾ ತಮಾಷೆ ಮಾಡಿದರು. ಈ ವೇಳೆ ಸಂಜಯ್ ಬಂಗಾರ್ ಇಷ್ಟು ಕೇವಲವಾಗಿ ಮಾತನಾಡುವುದು ಸರಿಯಲ್ಲ. ಆರ್‌ಸಿಬಿ ಅಭಿಮಾನಿಗಳು ನಿಮ್ಮನ್ನು ಗಮನಿಸುತ್ತಿರುತ್ತಾರೆ ಎಂದರು. ಇದಕ್ಕೆ ರಾಯುಡು ಅವರಿಗೇನು ಕೆಲಸ ಕೇವಲ ನೋಡುವುದು ಮಾತ್ರವಲ್ಲವೇ ಎಂದರು. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಅಭಿಮಾನಿಗಳನ್ನು ಕೆಣಕಿದ್ದಾರೆ. ಈ ಬಾರಿ ಚೆನ್ನೈ ಮತ್ತು ಆರ್‌ಸಿಬಿ ಪಂದ್ಯದ ವೇಳೆ ಆರ್‌ಸಿಬಿ ಗೆದ್ದರೆ ರಾಯುಡು ಟ್ರೋಲ್ ಆಗುವುದಂತು ನಿಜ.
