ತುಮಕೂರು
ದೇಶದ ಎಲ್ಲ ವರ್ಗದ ಜನರಿಗೆ ಸಮಾನತೆಯನ್ನು ಕಲ್ಪಿಸಿದ ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅನನ್ಯ. ಅವರ ಆಶಾಯಗಳನ್ನು ಈಡೇರಿಸುವ ಜವಾಬ್ಧಾರಿ ಯುವಕರ ಮೇಲೆ ಹೆಚ್ಚಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ನಗರದ ಗೆದ್ದಲಹಳ್ಳಿಯ ಸರ್ಕಾರಿ ವೃತ್ತಿಪರ ಕಾಲೇಜು ವಸತಿನಿಲಯದ ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೂಲಭೂತ ಸವಲತ್ತುಗಳನ್ನು ವಿತರಿಸಿದ ಬಳಿಕ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿನ ಎರಡು ರೀತಿಯ ನ್ಯೂನತೆಗಳನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರು ಗಮನಿಸಿದ್ದರು. ಸಮಾಜವು ಮಹಿಳೆಯರನ್ನು ನಾಲ್ಕು ಗೋಡೆಗಳ ಮಧ್ಯೆ ಸೀಮಿತಗೊಳಿಸಿರುವುದು, ಶೋಷಿತ ಸಮುದಾಯಗಳನ್ನು ನಿರ್ಲಕ್ಷ್ಯಕ್ಕೆ ಒಳಪಡಿಸಿರುವುದಾಗಿತ್ತು. ಇದು ಅವರನ್ನು ಗಾಡ ಚಿಂತನೆಗೆ ಒಳಪಡಿಸಿತ್ತು. ಹೀಗಾಗಿ ದೇಶದ ಎಲ್ಲ ವರ್ಗದ ಜನರ ಅಭಿವೃದ್ಧಿ ನಿಟ್ಟಿನಲ್ಲಿ ಅವಕಾಶಗಳನ್ನು ಕಲ್ಪಿಸಿದರು ಎಂದರು.
ದೇಶದಲ್ಲಿ ಅಂಬೇಡ್ಕರ್ ಅವರಂತ ಮತ್ತೊಬ್ಬ ಮಹಾನ್ ವ್ಯಕ್ತಿ ಹುಟ್ಟಲು ಸಾಧ್ಯವಿಲ್ಲ. ಶೋಷಿತ ಜನರ ಧ್ವನಿಯಾಗಿದ್ದಾರೆ. ಅವರು ತೆಗೆದುಕೊಂಡ ತೀರ್ಮಾನದಿಂದ ಸಮಾನತೆಯ ಬದುಕು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಸಂವಿಧಾನ ಬದಲಾವಣೆ ಅಥವಾ ತಿದ್ದುಪಡಿಯ ಮೂಲಕ ಶೋಷಿತರಿಗೆ ನೀಡಿರುವ ಮೀಸಲಾತಿಯನ್ನು ಕಿತ್ತುಕೊಳ್ಳುವುದು ಅಸಾಧ್ಯ ಎಂದು ಹೇಳಿದರು.
ದೇಶದಲ್ಲಿ ಮಹಿಳಾ ಸಬಲೀಕರಣವಾಗಬೇಕು ಎಂಬುದು ಅಂಬೇಡ್ಕರ್ ಅವರ ಕನಸು. ಪ್ರಗತಿಯ ಹಾದಿಗೆ ಮಹಿಳೆಯರನ್ನು ಪಾಲ್ಗೊಳ್ಳಲು ಬಿಡದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ. 73 ಮತ್ತು 74ನೇ ಕಲಂ ತಿದ್ದುಪಡಿಗೊಳಿಸುವ ಮೂಲಕ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್‌ನಲ್ಲಿ ಮಹಿಳೆಯರ ಮೀಸಲಾತಿ ಸೌಲಭ್ಯವನ್ನು ಹೆಚ್ಚಿಸಲಾಯಿತು. ಇದರಿಂದ ಮಹಿಳೆಯರ ಸಾಧನೆ ಏನೆಂಬುದು ಗೊತ್ತಾಗುತ್ತಿದೆ ಎಂದು ಹೇಳಿದರು.
ಮಹಿಳೆಯರು ಯಶಸ್ಸಿನ ಹಾದಿ ತಲುಪಲು ತಮ್ಮ ಮುಂದಿರುವ ಸವಾಲುಗಳು ಮತ್ತು ಅವಕಾಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಸೇರಿದಂತೆ ಸರ್ಕಾರ ನೀಡುತ್ತಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ನಿಶ್ಚಿತ ಗುರಿ ತಲುಪಬೇಕು ಎಂದು ತಿಳಿಸಿದರು.ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಹಾಸ್ಟೇಲ್‌ನ ವಿದ್ಯಾರ್ಥಿನಿಯರನ್ನು ಪುರಸ್ಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ