ವಾಷಿಂಗ್ಟನ್:
ಇರಾನ್ ಜೊತೆಗೆ ಭಾರತ ಚಾಬಹಾರ್ ಬಂದರು ಒಪ್ಪಂದ ಮಾಡಿಕೊಂಡಿರುವ ಬೆನ್ನಲ್ಲೇ ಅಮೆರಿಕ ನಿರ್ಬಂಧ ಹೇರುವ ಎಚ್ಚರಿಕೆ ನೀಡಿದ್ದು, ಭಾರತೀಯ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುವುದಾಗಿ ಹೇಳಿದೆ.
ಇರಾನ್ ಜೊತೆಗೆ ವ್ಯಾಪಾರ-ವಹಿವಾಟಿಗಳನ್ನು ಮುಂದುವರೆಸಿದರೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಅಮೆರಿಕ ಎಲ್ಲಾ ದೇಶಗಳಿಗೆ ಎಚ್ಚರಿಸಿದ್ದು, ಈ ಬಗ್ಗೆ ಸ್ಟೇಟ್ ಡಿಪಾರ್ಟ್‌ಮೆಂಟ್ ಉಪ ವಕ್ತಾರ ವೇದಾಂತ್ ಪಟೇಲ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಚಾಬಹಾರ್ ಬಂದರಿಗೆ ಸಂಬಂಧಿಸಿದಂತೆ ಭಾರತ-ಇರಾನ್ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ಇರಾನ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದಂತೆ ತನ್ನದೇ ಆದ ವಿದೇಶಾಂಗ ನೀತಿ ಅನುಸರಿಸಲು ಭಾರತ ಮುಕ್ತವಾಗಿದೆ. ಆದರೆ ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿರುವುದನ್ನು ಭಾರತ ಗಮನದಲ್ಲಿಟ್ಟುಕೊಳ್ಳಬೇಕು. ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ ಇನ್ನೂ ಮುಂದುವರೆಯಲಿದೆ. ಇದು ಭಾರತಕ್ಕೆ ಮುಂದೊಂದು ದಿನ ಭಾರೀ ಅಪಾಯವನ್ನು ತಂದೊಡ್ಡಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಕೆಲವು ದಿನಗಳ ಹಿಂದೆ ಇರಾನ್ ಜೊತೆ ವ್ಯಾಪಾರ ಸಂಬಂಧ ಹೊಂದಿದ್ದ ಸಂಸ್ಥೆಗಳು, ವ್ಯಕ್ತಿಗಳ ಮೇಲೆ ಅಮೆರಿಕ ನಿರ್ಬಂಧ ಹೇಳಿರುವ ಬಗ್ಗೆ ನಿಮಗೆ ತಿಳಿದಿರಬಹುದು. ಹೀಗಾಗಿ ಇರಾನ್ ಜೊತೆಗೆ ಸಂಬಂಧ ಬೆಳೆಸಿ ನಿರ್ಬಂಧದ ರಿಸ್ಕ್ ಅನ್ನು ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಅಮೆರಿಕ ಹೇಳಿದೆ.