ಲೆಕ್ಸಿಂಗ್ಟನ್ (ಅಮೆರಿಕ):
ಮಾನವನಿಗೆ ಹಂದಿ ಹೃದಯ ಕಸಿ.. ಹಾರ್ಟ್ ಪೇಸೆಂಟ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ.. ವೈದ್ಯರ ಮೇರು ಸಾಧನೆ!
ವೈದ್ಯರು ಹಂದಿಯ ಹೃದಯವನ್ನು ರೋಗಿಯಲ್ಲಿ ಅಳವಡಿಸಿ, ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿ ಈ ಮೂಲಕ ನೂತನ ಸಾಧನೆ ಮಾಡಲಾಗಿದೆ.
ಹಂದಿಯ ಹೃದಯದಿಂದಲೂ ಮಾನವ ಜೀವನ ಉಳಿಸಬಹುದು ಮತ್ತು ಪ್ರಾಣಿಗಳ ಅಂಗಾಂಗಗಳನ್ನ ಬಳಸಿಕೊಂಡು ಪ್ರಾಣ ಉಳಿಸಬಹುದು ಎಂಬುದನ್ನು ಈ ಅನ್ವೇಷಣೆ ಹಾಗೂ ಶಸ್ತ್ರಚಿಕಿತ್ಸೆ ತೋರಿಸಿಕೊಟ್ಟಿದೆ.
ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರ ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯರು ತಿಳಿಸಿದ್ದಾರೆ.
57 ವರ್ಷ ವಯಸ್ಸಿನ ಡೇವಿಡ್ ಬೆನೆಟ್ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಶುಕ್ರವಾರ ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ ಜೋಡನೆ ಮಾಡಿ ಬದುಕಿಸಲಾಗಿತ್ತು.
ಈ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಾನವನ ದೇಹದಲ್ಲಿ ಪ್ರಾಣಿಗಳ ಹೃದಯವು ಚನ್ನಾಗಿಯೇ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ದೃಢೀಕರಿಸಲಾಗಿದೆ.
ಶಸ್ತ್ರಚಿಕಿತ್ಸೆಗಳಿಗೆ ಬೇಕಾದ ಮಾನವ ಅಂಗಾಗಗಳ ಕೊರತೆಯಿರುವ ಈ ಸಂದರ್ಭದಲ್ಲಿ ಪ್ರಾಣಿಗಳ ಅಂಗಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು ಅನ್ವೇಷಣೆಗಳು ನಡೆಯುತ್ತಿವೆ.ಈ ಅನ್ವೇಷಣೆಗೆ ಅಮೆರಿಕ ವೈದ್ಯರು ನಡೆಸಿರುವ ಈ ಶಸ್ತ್ರಚಿಕಿತ್ಸೆ ಹಲವರಿಗೆ ಪ್ರೇರಣೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ