ಚುನಾವಣೆ ಕೊನೆ ಹಂತ ಮುಗಿಯುವ ಮುನ್ನ ಸಿಎಎ ಜಾರಿ : ಅಮಿತ್‌ ಷಾ

ನವದೆಹಲಿ

ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಅಡಿಯಲ್ಲಿ ಮೊದಲ ಪೌರತ್ವವನ್ನು ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ನಿಯಮಗಳ ಪ್ರಕಾರ ಪರಿಶೀಲನೆ ನಡೆಯುತ್ತಿದೆ ಎಂದು ಅಮಿತ್ ಶಾ ನ್ಯೂಸ್ 18 ಗೆ ನೀಡಿರುವ ಸಂದರ್ಶನದಲ್ಲಿ ಲೋಕಸಭಾ ಚುನಾವಣೆ ಕೊನೆಯ ಹಂತದ ಮೊದಲು, ಪೌರತ್ವ ನೀಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿದ್ದೇನೆ ಎಂದು ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ಸಿಎಎ ಅನ್ನು ಜಾರಿಗೆ ತಂದಿತು, ಇದು ಡಿಸೆಂಬರ್ 31, 2014 ಕ್ಕಿಂತ ಮೊದಲು ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಪಡೆಯಲು ಅವಕಾಶ ಮಾಡಿಕೊಡುತ್ತದೆ. ಡಿಸೆಂಬರ್ 2019 ರಲ್ಲಿ ಸಂಸತ್ತು ಕಾನೂನು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಮಹತ್ವದ ಬೆಳವಣಿಗೆ ಬಂದಿದೆ. 

ಸಿಎಎ ಬಗ್ಗೆ ವಿರೋಧ ಪಕ್ಷಗಳು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿಕೊಂಡು ಬಂದಿವೆ. ಕಾಯ್ದೆಯಲ್ಲಿರುವ ಅಧಿಸೂಚಿತ ನಿಯಮಗಳು ಅಸಂವಿಧಾನಿಕ, ತಾರತಮ್ಯ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪೌರತ್ವದ ಜಾತ್ಯತೀತ ತತ್ವದ ಉಲ್ಲಂಘನೆಯಾಗಿದೆ ಎಂದು ಹೇಳಿವೆ. 

ಗುರುವಾರ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳನ್ನು ದಾಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ ಎಣಿಕೆ ದಿನ ಮಧ್ಯಾಹ್ನ 12.30 ಕ್ಕೆ ಮುನ್ನವೇ ಎನ್‌ಡಿಎ 400ರ ಗಡಿಯನ್ನು ದಾಟುತ್ತದೆ. ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಮೊದಲ ಎರಡು ಹಂತಗಳಲ್ಲಿ ನೂರಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ. 400ರ ಗುರಿಯನ್ನು ದಾಟುವಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದು ನ್ಯೂಸ್‌ 18ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಬಂಧನದ ಬಗ್ಗೆಯೂ ಅಮಿತ್ ಶಾ ಮಾತನಾಡಿ, “ಹಲವು ಸಮನ್ಸ್‌ಗಳ ನಂತರ ಅವರು ವಿಚಾರಣಗೆ ಬಂದಿಲ್ಲ, ಮೊದಲ ಸಮನ್ಸ್‌ನ ನಂತರ ಅವರು ವಿಚಾರಣೆಗೆ ಬಂದಿದ್ದರೆ ಚುನಾವಣೆ ಆರು ತಿಂಗಳ ಮೊದಲೇ ಬಂಧಿಸಲಾಗುತ್ತಿತ್ತು” ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap