ಬೆಂಗಳೂರು:
ಚುನಾವಣೆಯಲ್ಲಿ ಗೆಲ್ಲಲು ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳು ತಂತ್ರಗಳನ್ನು ಹೂಡುತ್ತಿವೆ. ಈತನ್ಮಧ್ಯೆ ಕರ್ನಾಟಕದಲ್ಲಿ ಎಲ್ಲಾ 28 ಸ್ಥಾನಗಳನ್ನೂ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಭರ್ಜರಿ ಪ್ರಚಾರವನ್ನು ನಡೆಸುತ್ತಿದೆ. ಇದರ ಭಾಗವಾಗಿ ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.
ವಿಶೇಷ ವಿಮಾನದ ಮೂಲಕ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದರು.
ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ, ಇಂದು ಚುನಾವಣಾ ಪ್ರಚಾರ ಕಾರ್ಯಗಳ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.
ಇಂದು ಸಂಜೆ 5:50ಕ್ಕೆ ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಬಳಿಯ ಹೆಲಿಪ್ಯಾಡ್‌ಗೆ ಬಂದಿಳಿಯಲಿರುವ ಅಮಿತ್ ಶಾ ರಸ್ತೆಯ ಮೂಲಕ ಚಿಕ್ಕಮಳೂರು ಗ್ರಾಮಕ್ಕೆ ಆಗಮಿಸಲಿದ್ದಾರೆ. ಚಿಕ್ಕಮಗಳೂರು ಗ್ರಾಮದಿಂದ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೋಡ್ ಶೋ ಆರಂಭಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಪರ ಸುಮಾರು ಒಂದೂವರೆ ಕಿ.ಮೀ ದೂರ ಮೆರವಣಿಗೆ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಅಮಿತ್ ಶಾ ಕಾರ್ಯಕ್ರಮದಲ್ಲಿ ವಿಜಯೇಂದ್ರ, ಅಶೋಕ್, ಕುಮಾರಸ್ವಾಮಿ, ನಿಖಿಲ್ ಸೇರಿ ಸ್ಥಳೀಯ ಮುಖಂಡರು ಭಾಗಿಯಾಗಲಿದ್ದು ಸುಮಾರು 25 ಸಾವಿರಕ್ಕೂ ಹೆಚ್ಚು ಜನರನ್ನ ಸೇರಿಸಲು ಬಿಜೆಪಿ ಮುಖಂಡರು ಪ್ಲಾನ್ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ನ ಏಕೈಕ ಸಂಸದನನ್ನ ಮಣಿಸಲು ಬಿಜೆಪಿ-ಜೆಡಿಎಸ್ ಮೊದಲ ಬಾರಿಗೆ ಬೃಹತ್ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ.
ಇನ್ನು ಮುಖ್ಯವಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲೋಕಸಭೆ ವಿಚಾರವಾಗಿ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದು, ಬಂಡಾಯವೆದ್ದ ನಾಯಕರನ್ನು ಕರೆದು ಬಂಡಾಯ ಶಮನ ಮಾಡುವ ಸಾಧ್ಯತೆ ಇದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬಂಡಾಯ ಹಿನ್ನೆಲೆ ರೆಬೆಲ್ ಆಗಿರುವ ಮಾಜಿ ಶಾಶಕ ರೇಣುಕಾಚಾರ್ಯ ಮತ್ತು ತಂಡಕ್ಕೆ ಅಮಿತ್ ಶಾ ಸಭೆಗೆ ಬರುವಂತೆ ರಾಧಾ ಮೋಹನ್ ದಾಸ್ ಅಗರವಾಲಾ ಸೂಚನೆ ನೀಡಿದ್ದು, ಹೀಗಾಗಿ ಇಂದು ಅಮಿತ್ ಶಾ ಕರೆದಿರುವ ಸಭೆಯಲ್ಲಿ ಭಾಗಿಯಾಗಲಿರುವ ರೇಣುಕಚಾರ್ಯ ಅಂಡ್ ಟೀಮ್ ತಮ್ಮ ಅಳಲನ್ನು ತೋಡಿಕೊಳ್ಳಲಿದ್ದಾರೆ.
ದಾವಣಗೆರೆಯ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್‌ಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಂಡಾಯದ ನಡೆ ತೋರಿದ್ದ ರೇಣುಕಾಚಾರ್ಯ ಮತ್ತು ಅನೇಕ ನಾಯಕರು ಕೂಡಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸುವಂತೆ ಆಗ್ರಹಿಸಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರ ಸಹಿತ ಯಾರೂ ಇವರ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.