ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಸ್ಫೋಟ

ಚಂಡೀಗಢ:

   ಪಂಜಾಬ್‌ನ ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಸ್ಫೋಟ (Amritsar Temple) ಸಂಭವಿಸಿದ್ದು, ಗೋಡೆ ಹಾಗೂ ಕಿಟಕಿಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸ್ಫೋಟದ ಶಬ್ದಕ್ಕೆ ಖಂಡ್ವಾಲಾ ಪ್ರದೇಶದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ಘಟನೆಯ ವಿಡಿಯೋ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಗಳು ದೇವಾಲಯದ ಬಳಿ ಬೈಕ್‌ನಲ್ಲಿ ಬಂದಿರುವುದು, ಕೆಲ ಸೆಕೆಂಡುಗಳ ಕಾಲ ಕಾದು ದೇವಾಲಯದತ್ತ ಸ್ಫೋಟಕಗಳನ್ನು ಎಸೆದು, ಪರಾರಿಯಾಗಿರುವ ದೃಶ್ಯ ಕಂಡು ಬಂದಿದೆ.

   ಮೋಟಾರ್ ಸೈಕಲ್‌ನಲ್ಲಿ ಠಾಕೂರ್ ದ್ವಾರದ ಬಳಿ ಇಬ್ಬರು ವ್ಯಕ್ತಿಗಳು ಬಂದಿದ್ದಾರೆ. ಒಬ್ಬನು ದೇವಾಲಯದ ಕಡೆಗೆ ಕೆಲವು ಸ್ಫೋಟಕ ವಸ್ತುಗಳನ್ನು ಎಸೆದಿದ್ದಾನೆ. ನಂತರ ತಕ್ಷಣ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲಾರ್‌ ಬೆಳಗಿನ ಜಾವ 2 ಗಂಟೆಗೆ ಸುಮಾರಿಗೆ ಘಟನೆ ಕರಿತು ದೇವಾಲಯದ ಅರ್ಚಕರು ಮಾಹಿತಿ ನೀಡಿದರು. ಮಾಹಿತಿ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸ್ಫೋಟಕಗಳನ್ನು ಎಸೆದ ವ್ಯಕ್ತಿಗಳ ಪತ್ತೆಗೆ ತಂಡ ರಚಿಸಲಾಗಿದೆ. ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಸ್ಫೋಟದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಪ್ರಯತ್ನಿಸುತ್ತಿವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಇದೀಗ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಅಮೃತಸರ ಹಾಗೂ ಗುರುದಾಸಪುರ ಪ್ರದೇಶಗಳಲ್ಲಿ ಪೊಲೀಸ್ ಠಾಣೆಯನ್ನೇ ಗುರಿಯಾಗಿಸಿಕೊಂಡು ಹಲವು ದಾಳಿಗಳು ನಡೆದಿವೆ. 

    ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಭಗವಂತ್ ಮಾನ್, ಅಮೃತಸರದ ಖಂಡ್ವಾಲಾದ ಠಾಕೂರ್ದ್ವಾರ ದೇವಸ್ಥಾನದಲ್ಲಿ ನಿನ್ನೆ ತಡರಾತ್ರಿ ಸ್ಫೋಟ ಸಂಭವಿಸಿದ ನಂತರ ರಾಜ್ಯದಲ್ಲಿ ಶಾಂತಿ ಕದಡಲು ಹಲವು ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ ಶಾಂತಿ ಕದಡಲು ಯಾವಾಗಲೂ ಅನೇಕ ಪ್ರಯತ್ನಗಳು ನಡೆಯುತ್ತವೆ. ಡ್ರಗ್ಸ್, ದರೋಡೆಕೋರರು ಮತ್ತು ಸುಲಿಗೆ ಅದರ ಭಾಗವಾಗಿದೆ, ಮತ್ತು ಪಂಜಾಬ್ ಅಸ್ತವ್ಯಸ್ತ ರಾಜ್ಯವಾಗಿದೆ ಎಂದು ತೋರಿಸಲು ಪ್ರಯತ್ನಗಳು ನಡೆಯುತ್ತಿವೆ. ಹೋಳಿ ಹಬ್ಬದ ಸಮಯದಲ್ಲಿ, ಇತರ ರಾಜ್ಯಗಳಲ್ಲಿ, ಮೆರವಣಿಗೆಗಳ ಸಮಯದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿತ್ತು. ಆದರೆ ಪಂಜಾಬ್‌ನಲ್ಲಿ ಅಂತಹ ವಿಷಯಗಳು ನಡೆಯುವುದಿಲ್ಲ. ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ” ಎಂದು ಮುಖ್ಯಮಂತ್ರಿ ಹೇಳಿದರು.