ಇಂದು ಕುಂಭಮೇಳದ ಕೊನೆಯ ಅಮೃತಸ್ನಾನ….!

ಲಖನೌ:

   ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಭಾರೀ ಕಾಲ್ತುಳಿತ ಸಂಭವಿಸಿ ಬರೋಬ್ಬರಿ 30 ಜನ ಬಲಿಯಾದ ನಂತರ ಇಂದು ಅಮೃತಸ್ನಾನ ನೆರವೇರಿದೆ. ಬಸಂತ್ ಪಂಚಮಿಯ ಶುಭ ಸಂದರ್ಭದಲ್ಲಿ ಬೆಳಗ್ಗಿನ ಜಾವ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಬೆಳಗಿನ ನಾಗ ಸಾಧುಗಳು ಮತ್ತು ಇತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮೂಲಕ ಈ ಮಹಾಕುಂಭ ಮೇಳದ ಕೊನೆಯ ಅಮೃತಸ್ನಾನ ಪ್ರಾರಂಭವಾಯಿತು. ಬೆಳಗಿನ ಜಾವ 4 ಗಂಟೆಯವರೆಗೆ 16 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾ ಕುಂಭ ಆರಂಭವಾದಾಗಿನಿಂದ ಪವಿತ್ರ ಸ್ನಾನ ಮಾಡಿದವರ ಒಟ್ಟು ಸಂಖ್ಯೆ ಸುಮಾರು 35 ಕೋಟಿ.

   ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳ ಪ್ರಕಾರ ಇಂದು ಕನಿಷ್ಠ ಮೂರು ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ. ವಾರದ ಹಿಂದೆ ಪ್ರಯಾಗ್‌ರಾಜ್‌ ಕುಂಭಮೇಳದಲ್ಲಿ ಜನಸಂದಣಿಯಿಂದಾಗಿ ಉಂಟಾದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿ 60 ಜನರು ಗಾಯಗೊಂಡ ದುರ್ಘಟನೆ ನಂತರ ನಡೆಯುತಿರುವ ಮೊದಲ ಪವಿತ್ರಸ್ನಾನ ಇದಾಗಿದೆ. ಹೀಗಾಗಿ ಸ್ಥಳದಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಜನದಟ್ಟನೆಯನ್ನು ನಿರ್ವಹಿಸಲು ಸಾಕಷ್ಟು ಸಿಬ್ಬಂದಿ ನಿಯೋಜಿಸಲಾಗಿದೆ.

  ಇನ್ನು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಲಕ್ನೋ ನಿವಾಸದಲ್ಲಿರುವ ವಾರ್‌ ರೂಂನಿಂದ ಬೆಳಗಿನ ಜಾವ 3.30 ರಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಿದ್ದಾರೆ. 77 ಮಹಿಳಾ ಅಧಿಕಾರಿಗಳು ಸೇರಿದಂತೆ ಕನಿಷ್ಠ 270 ಐಪಿಎಸ್ ಅಧಿಕಾರಿಗಳು ಪ್ರಯಾಗ್‌ರಾಜ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಯಾವುದೇ ಪವಿತ್ರ ಸ್ನಾನ ನಡೆಯುವ ಒಂದು ದಿನ ಮೊದಲು ಮತ್ತು ಸ್ನಾನದ ದಿನದಂದು ವಿವಿಐಪಿಗಳ ಭೇಟಿಯನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ. 

  ಈ ಬಾರಿಯ ಮಹಾಕುಂಭಮೇಳ 3 ಅಮೃತ ಸ್ನಾನಕ್ಕೆ ಸಾಕ್ಷಿಯಾಗಿದೆ. ಜನವರಿ 14ರ ಮಕರ ಸಂಕ್ರಾಂತಿ, ಜನವರಿ 29ರ ಮೌನಿ ಅಮಾವಾಸ್ಯೆ ಹಾಗೂ ಫೆಬ್ರವರಿ 3ರ ಬಸಂತ್ ಪಂಚಮಿಯಂದು ನಾಗಾಸಾಧುಗಳು ಅಮೃತ ಸ್ನಾನದಲ್ಲಿ ಮಿಂದೆದ್ದಿದ್ದಾರೆ. ಇವತ್ತು ಪವಿತ್ರ ಬಸಂತ್ ಪಂಚಮಿಯ ದಿನವಾಗಿದ್ದು, ಅಮೃತ ಸ್ನಾನ ಮಾಡಲಾಗುತ್ತಿದೆ. ಇದು ಮಹಾಕುಂಭ ಮೇಳದ ಕೊನೆಯ ಅಮೃತಸ್ನಾನವಾಗಿದೆ.

   ಜನವರಿ 29. ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತ 30 ಜನರನ್ನು ಬಲಿ ಹಾಕಿತ್ತು.. ಅದ್ರಲ್ಲೂ ಕರ್ನಾಟಕದ ನಾಲ್ವರು ದುರ್ಮರಣಕ್ಕೀಡಾಗಿದ್ದರು.. ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ದುರಂತದ ದಿನ ತ್ರಿವೇಣಿ ಸಂಗಮ ಪ್ರದೇಶದಲ್ಲಿ 16 ಸಾವಿರ ಮೊಬೈಲ್ ನಂಬರ್​​ಗಳು ಸಕ್ರಿಯವಾಗಿದ್ದನ್ನ ಪತ್ತೆ ಹಚ್ಚಿದ್ದಾರೆ. ಸದ್ಯ 16 ಸಾವಿರಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳ ದತ್ತಾಂಶಗಳನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆ ಸಂಖ್ಯೆಗಳಲ್ಲಿ ಹಲವು ಪ್ರಸ್ತುತ ಸ್ವಿಚ್ ಆಫ್ ಆಗಿವೆ ಎನ್ನಲಾಗಿದೆ. ಕಾಲ್ತುಳಿತ ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ಕಮಿಟಿ ರಚನೆ ಮಾಡಲಾಗಿದ್ದು ದುರಂತದ ಸ್ಥಳಕ್ಕೆ ತೆರಳಿ ಆಯೋಗ ಪರಿಶೀಲನೆ ನಡೆಸಿದೆ.

Recent Articles

spot_img

Related Stories

Share via
Copy link