ಹೊಸಪೇಟೆ:
ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಸತತ ಮೂರುಬಾರಿ ಗೆಲುವು ಸಾಧಿಸಿದ್ದ ಹ್ಯಾಟ್ರಿಕ್ ಶಾಸಕ ಆನಂದ್ ಸಿಂಗ್ ಸೋಮವಾರ ದಿಢೀರ್‍ನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿರುವುದು ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಠಿಯಾಗಿದ್ದು ರಾಜಕೀಯ ವಲಯದಲ್ಲಿ ತಲ್ಲಣ್ಣುಂಟುಮಾಡಿದೆ.
ಜಿಂದಾಲ್ ವಿರುದ್ಧ ತೊಡೆತಟ್ಟಿದ ಸಿಂಗ್:
ಜಿಲ್ಲೆಯ ತೋರಣಗಲ್ಲು ಪ್ರದೇಶದ ಜಿಂದಾಲ್ ಉಕ್ಕು ಸಂಸ್ಥೆಗೆ ರಾಜ್ಯ ಸಮ್ಮಿಶ್ರ ಸರಕಾರದ ಸಚಿವ ಸಂಪುಟ 3ಸಾವಿರಕ್ಕೂ ಅಧಿಕ ಭೂಮಿ ಪರಭಾರೆಗೆ ಮುಂದಾಗಿರುವುದಕ್ಕೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಜಿಲ್ಲೆಯ ಕೆಲ ಕಾಂಗ್ರೆಸ್, ಬಿಜೆಪಿ ಶಾಸಕರೇ ಬಹಿರಂಗವಾಗಿ ಭೂಮಿ ಪರಭಾರೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ನಡುವೆ ವಿಜಯನಗರ ಶಾಸಕ ಆನಂದ್ ಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ಬಹಿರಂಗವಾಗಿ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆಗೆ ತೊಡ್ಡೆತಟ್ಟುವ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಶಾಸಕ ಸಿಂಗ್ ಒಂದು ಹೆಜ್ಜೆ ಮುಂದೇ ಹೋಗಿ ಜಿಂದಾಲ್ ಸುತ್ತಮುತ್ತ ಗ್ರಾಮಗಳಿಗೆ ತೆರಳಿ ಜನಾಭಿಪ್ರಾಯಕ್ಕೂ ಮುಂದಾಗಿದ್ದರೂ. ಆದರೆ ಇದಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಲಿ, ಸಿಎಂ ಕುಮಾರಸ್ವಾಮಿಯಾಗಲಿ ಕರೆದು ಚರ್ಚಿಸುವ ಬಗ್ಗೆ ಆಸಕ್ತಿ ತೋರದ ಹಾಗೂ ಶಾಸಕಸಿಂಗ್‍ರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಹಿನ್ನೆಲೆಯಲ್ಲಿ ಸಿಂಗ್ ಧಿಡೀರನೆ ರಾಜೀನಾಮಗೆ ಮುಂದಾಗುವ ಮೂಲಕ ಕೈ ನಾಯಕರನ್ನು, ಸರಕಾರವನ್ನು ಇಕಟ್ಟಿಗೆ ಸಿಲುಕಿಸುವ ತಂತ್ರಕ್ಕೆ ಮುಂದಾಗಿದ್ದಾರೆ.
ರಾಜೀನಾಮಗೆ ಗಣಿ ಕಾರಣವೇ?
ಈ ಹಿಂದೆ ಶಾಸಕ ಆನಂದ್ ಸಿಂಗ್ ಪಾಲುದಾರಿಕೆಯಲ್ಲಿ ರಾಮ್‍ರಾವ್ ಪೊಳ್ ಗಣಿ ಪ್ರದೇಶವು ಅತಿ ಹೆಚ್ಚು ಕಬ್ಬಿಣಾಂಶ ಹೊಂದಿದ್ದು ಆನಂದ್ ಸಿಂಗ್ ಒಡೆತನದಲ್ಲಿತ್ತು. ಅಕ್ರಮ ಮೈನಿಂಗ್ ತನಿಖಾ ಸಂದರ್ಭದಲ್ಲಿ ಸದರಿ ಪ್ರದೇಶವು ಸಿ ಕೆಟಗೇರಿಗೆ ಸೇರಿಸಲಾಗಿತ್ತು. ಅಲ್ಲದೇ ಸದ್ಯ ರಾಜ್ಯ ಸರಕಾರ ಜಿಂದಾಲ್‍ಗೆ ಪರಭಾರೆಗೆ ಮುಂದಾಗಿರುವ 3667 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿಯೇ ಈ ಗಣಿ ಪ್ರದೇಶವು ಬರುತ್ತಿರುವುದರಿಂದ ಅದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂಬ ಹಠಕ್ಕೆ ಬಿದ್ದಿದ್ದ ಸಿಂಗ್ ಈ ಗಣಿ ಪ್ರದೇಶವನ್ನು ಮತ್ತೆ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಸಿ ಕೆಟಗೇರಿಯಿಂದ ಹೊರತರಲು ಕಾನೂನಾತ್ಮಕವಾಗಿ, ರಾಜಕೀಯವಾಗಿ ಸಾಕಷ್ಟು ಯತ್ನಿಸಿದ್ದರು. ಈ ನಡುವೆಯೇ ಪರಭಾರೆಗೆ ರಾಜ್ಯ ಸರಕಾರ ಮುಂದಾಗಿರುವುದರಿಂದ ಕೆಂಡಾಮಂಡಲಗೊಂಡ ಸಿಂಗ್ ರಾಜೀನಾಮೆ ತಂತ್ರಕ್ಕೆ ಮುಂದಾಗಿದ್ದಾರೆ ಎಂಬುದು ಆಪ್ತ ಮೂಲಗಳ ಮಾಹಿತಿಯಾಗಿದೆ.
ಅನಿಲ್ ಲಾಡ್ ಬೆಂಬಲ!
ಶಾಸಕ ಆನಂದ್ ಸಿಂಗ್ ರಾಮ್‍ರಾವ್ ಪೊಳ್ ಗಣಿ ಪ್ರದೇಶದ ಮಾದರಿಯಲ್ಲಿಯೇ ಅನಿಲ್ ಲಾಡ್ ರವರ ಗಣಿ ಪ್ರದೇಶವು ಜಿಂದಾಲ್‍ಗೆ ಪರಭಾರೆಯಾಗಿರುವ ಭೂ ಪ್ರದೇಶದಲ್ಲಿಯೇ ಒಳಪಟ್ಟಿದೆ. ಇದನ್ನು ಲಾಡ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದರಿಂದ ಈ ಸನ್ನಿವೇಶವನ್ನು ಬಳಸಿಕೊಂಡು ಶಾಸಕ ಆನಂದ್ ಸಿಂಗ್‍ರೊಂದಿಗೆ ಕೈಜೋಡಿಸಿ ಸರಕಾರ ಮತ್ತು ಜಿಂದಾಲ್ ವಿರುದ್ಧ ಸೆಡ್ಡುಹೊಡೆದಿದ್ದಾರೆ ಎಂಬುದು ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ರೆಬೆಲ್‍ಗೆ ಕಾರಣ:
ಶಾಸಕ ಸಿಂಗ್ ಹಿಂದೆ ಯಡಿಯೂರಪ್ಪ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದರು. ಬದಲಾದ ರಾಜಕೀಯ ಸನ್ನಿವೇಶನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಶಾಸಕರಾಗಿ ಆಯ್ಕೆಯಾದರು. ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ಹಿರಿಯರು ಮಂತ್ರಿ ಸ್ಥಾನ ಸಿಗದಂತೆ ನೋಡಿಕೊಂಡಿದ್ದರು. ಇದರಿಂದ ಅಸಮಧಾನಗೊಂಡಿದ್ದ ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿದ್ದರು, ನಂತರದ ದಿನಗಳಲ್ಲಿ ಸಚಿವ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಬಳ್ಳಾರಿ ಲೋಕಸಭೆ ಮರು ಚುನಾವಣೆ ಸಂದರ್ಭದಲ್ಲಿ ವಿ.ಎಸ್. ಉಗ್ರಪ್ಪ ಗೆಲುವಿಗೆ ಕ್ಷೇತ್ರದಿಂದ ಹೆಚ್ಚಿನ ಲೀಡ್ ಕೊಡುವಲ್ಲಿಯೂ ಯಶಸ್ವಿಯಾಗಿದ್ದರು. ಆದರೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಹಾಗೂ ಬೆಂಗಳೂರಿನ ಈಗಲ್‍ಟನ್ ರೆಸಾರ್ಟ್‍ನಲ್ಲಿ ಶಾಸಕ ಗಣೇಶ್‍ರೊಂದಿಗಿನ ಗಲಾಟೆ ಬಳಿಕ ಪಕ್ಷದಲ್ಲಿ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಸಿಂಗ್ ಹಲವು ತಿಂಗಳು ಕ್ಷೇತ್ರದಿಂದ ಎಲ್ಲ ಬಗೆಯ ಚಟುವಟಿಕೆಗಳಿಂದ ದೂರ ಉಳಿಯುವ ಮೂಲಕ ಅಸಮಾಧಾನ ಹೊರಹಾಕಿದ್ದರು.
ಅಸ್ಥಿತ್ವಕ್ಕೆ ಸಿಂಗ್ ಹೆಣಗಾಟ!
ಶಾಸಕ ಸಿಂಗ್ ರಾಜಕೀಯ ಅಸ್ಥಿತ್ವಕ್ಕಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಶಾಸಕರಾಗಿ ಆಯ್ಕೆಯಾದರೂ ತಮ್ಮಗೆ ಬಯಸಿದಂತೆ ಸೂಕ್ತ ಸ್ಥಾನಮಾನ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಮಪರ್ಕ ಅನುದಾನ ದೊರೆಯದಿದ್ದರಿಂದ ಅಸಮಾಧಾನಗೊಂಡು ಮತ್ತೆ ಬಿಜೆಪಿಯತ್ತ ಮುಖಮಾಡಿದ್ದರು. ಇದನ್ನರಿತ ಸಿಎಂ ಕುಮಾರಸ್ವಾಮಿ, ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಸಮಾಧಾನಪಡಿಸಿ ಪಕ್ಷದಲ್ಲಿಯೇ ಮುಂದುವರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಾಸಕ ಗಣೇಶ್ ಗಲಾಟೆ ಬಳಿಕ ಪಕ್ಷದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಹಾಗೂ ಗಲಾಟೆಗೆ ಕಾರಣರಾದ ಶಾಸಕ ಗಣೇಶ್ ಪರ ಪಕ್ಷದಲ್ಲಿ ತೋರುತ್ತಿರುವ ಮೃಧು ಧೋರಣೆಯಿಂದ ತೀವ್ರವಾಗಿ ಮನನೊಂದ ಸಿಂಗ್ ಕುಟುಂಬ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಿದ ಪರಿಣಾಮ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಶಾಸಕ ಸಿಂಗ್ ರಾಜೀನಾಮೆ ವಿಷಯವನ್ನೇ ಮುಂದಿಟ್ಟುಕೊಂಡು ಸಚಿವ ರಮೇಶ್ ಜಾರಕಿಹೊಳಿ ಸಹ ರಾಜೀನಾಮೆಗೆ ಮುಂದಾಗಿದ್ದಾರೆ. ಇವರಿಬ್ಬರ ರಾಜೀನಾಮೆಯಿಂದ ಸಚಿವ ಸ್ಥಾನಸಿಗದೆ ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಬಿ.ಸಿ. ಪಾಟೀಲ್, ನಾಗೇಂದ್ರ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದ್ದು ಒಂದು ವೇಳೆ ಇದು ನಿಜವಾದಲ್ಲಿ ಆಷಾಢ ಮುಗಿದ ಬಳಿಕ ಶ್ರಾವಣದಲ್ಲಿ ಹೊಸ ಸರಕಾರ ಅಸ್ಥಿತ್ವಕ್ಕೆ ಬರುವುದೇ ಎಂಬುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ