ಬೆಂಗಳೂರು
ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿರುವುದು ಕರ್ನಾಟಕದಿಂದ ಸಂಚರಿಸುವ ರೈಲುಗಳ ಮೇಲೆಯೂ ಪರಿಣಾಮ ಬೀರಿದೆ. ರಾಜ್ಯದ ಬೆಂಗಳೂರು, ಮೈಸೂರುಗಳಿಂದ ಆಂಧ್ರ ಪ್ರದೇಶದ ಮೂಲಕ ತೆರಳುವ ಹಲವು ರೈಲುಗಳ ಸಂಚಾರ ರದ್ದಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ ಬಗ್ಗೆ ನೈಋತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ನೀಡಿದೆ. ಆಂದ್ರ ಪ್ರದೇಶದ ರಾಯನಪಾಡು ರೈಲು ನಿಲ್ದಾಣ ಜಲಾವೃತಗೊಂಡಿರುವುದರಿಂದ ಎಸ್ಎಂವಿಟಿ ಬೆಂಗಳೂರು ಹಾಗೂ ದನಾಪುರ್ ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಎಸ್ಎಂವಿಟಿ ಬೆಂಗಳೂರಿನಿಂದ ಮಹಾರಾಷ್ಟ್ರದ ಬಲ್ಹಾರ್ಷ ವರೆಗಿನ ಮಾರ್ಗ ಬದಲಾವಣೆಯಾಗಿದೆ.
ರಾಯನಪಾಡು ರೈಲು ನಿಲ್ದಾಣ ಜಲಾವೃತಗೊಂಡಿರುವುದರಿಂದ ಮೈಸೂರಿನಿಂದ ಹೌರಾ ತೆರಳುವ ರೈಲು ಸಂಖ್ಯೆ 22818, ಹೌರಾದಿಂದ ಮೈಸೂರಿಗೆ ಬರುವ ರೈಲು ಸಂಖ್ಯೆ 22818 ಸಂಚಾರ ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ 17210 ಕಾಕಿನಾಡ ಟೌನ್ – ಎಸ್ಎಂವಿಟಿ ಬೆಂಗಳೂರು, ರೈಲು ಸಂಖ್ಯೆ 17235 ಎಸ್ಎಂವಿಟಿ ಬೆಂಗಳೂರು – ನಾಗರಕೊಯಿಲ್, ರೈಲು ಸಂಖ್ಯೆ 17236 ನಾಗರಕೊಯಿಲ್ ಎಸ್ಎಂವಿಟಿ ಬೆಂಗಳೂರು, ರೈಲು ಸಂಖ್ಯೆ 17209 ಎಸ್ಎಂವಿಟಿ ಬೆಂಗಳೂರು – ಕಾಕಿನಾಡ ಟೌನ್ ಸಂಚಾರ ರದ್ದುಗೊಳಿಸಲಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅನೇಕ ಪ್ರದೇಶಗಳು ಜಲಾವೃತವಾಗೊಂಡಿವೆ ರಸ್ತೆ ಮತ್ತು ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.
ಈವರೆಗೆ 100 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ ಇತರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ದಕ್ಷಿಣ ಮಧ್ಯ ರೈಲ್ವೆ ಜಾಲದ ಅನೇಕ ಸ್ಥಳಗಳಲ್ಲಿ ಭಾರೀ ಮಳೆ ಮತ್ತು ಹಳಿಗಳ ಮೇಲೆ ನೀರು ಹರಿಯುತ್ತಿರುವ ಕಾರಣದಿಂದ ಹಲವಾರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.