ನವದೆಹಲಿ:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಸಹಾಯಕ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್‌ನ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಪಾಲ್ ಅವರನ್ನು ಬಂಧಿಸಲಾಗಿದೆ. ಕಂಪೆನಿಯಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಅವರನ್ನು ಸುಮಾರು 17,000 ಕೋಟಿ ರೂ. ಮೌಲ್ಯದ ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಅಶೋಕ್ ಕುಮಾರ್ ಪಾಲ್ ಅವರು ಕಂಪೆನಿಯಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸಿದ್ದು, ಏಳು ವರ್ಷಗಳಿಗೂ ಹೆಚ್ಚು ಕಾಲ ರಿಲಯನ್ಸ್ ಪವರ್‌ನಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದರು. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಸೇರಿದಂತೆ ಅವರ ಹಲವು ಕಂಪೆನಿಗಳಿಂದ 17,000 ಕೋಟಿ ರೂ. ಗಿಂತ ಹೆಚ್ಚು ಸಾಮೂಹಿಕ ಸಾಲಗಳಿಗೆ ಸಂಬಂಧಿಸಿ ಯೆಸ್ ಬ್ಯಾಂಕ್ ದೂರು ದಾಖಲಿಸಿತ್ತು.
2017 ಮತ್ತು 2019ರ ನಡುವೆ ಅನಿಲ್ ಅಂಬಾನಿ ಅವರ ಸಮೂಹ ಕಂಪೆನಿಗಳಿಗೆ ನೀಡಿದ ಸುಮಾರು 3,000 ಕೋಟಿ ರೂ. ಗಳ ಅಕ್ರಮ ಸಾಲ ವರ್ಗಾವಣೆಗೆ ಸಂಬಂಧಿಸಿ ಮೊದಲ ಆರೋಪ ಕೇಳಿ ಬಂದಿತ್ತು. ಬಳಿಕ ರಿಲಯನ್ಸ್ ಕಮ್ಯುನಿಕೇಷನ್ಸ್ ವಿರುದ್ಧ 14,000 ಕೋಟಿ ರೂ. ಗಳಿಗಿಂತ ಹೆಚ್ಚು ಅಕ್ರಮ ಸಾಲ ವರ್ಗಾವಣೆ ದೂರು ದಾಖಲಾಗಿತ್ತು. ಆರಂಭಿಕ ತನಿಖೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ಕಂಪೆನಿಗಳಿಗೆ ಸಾಲಗಳನ್ನು ನೀಡಿರುವುದು, ಸಾಮಾನ್ಯ ನಿರ್ದೇಶಕರು, ವಿಳಾಸಗಳ ಬಳಕೆ, ಅಗತ್ಯ ದಾಖಲೆಗಳಿಲ್ಲದೆ ಸಾಲ ನೀಡಿರುವುದು ಕಂಡು ಬಂದಿದೆ. ಕೆಲವು ಸಾಲಗಳನ್ನು ಅರ್ಜಿ ಸಲ್ಲಿಸಿದ ಅದೇ ದಿನ ಅನುಮೋದಿಸಿ ಬಿಡುಗಡೆ ಮಾಡಲಾಗಿದೆ ಎನ್ನುವುದು ಕೂಡ ತಿಳಿದು ಬಂದಿದೆ.
ಕಳೆದ ಜುಲೈ ತಿಂಗಳಲ್ಲಿ ಇಡಿ ಈ ಸಂಬಂಧ ದಾಳಿಗಳನ್ನು ನಡೆಸಲು ಪ್ರಾರಂಭಿಸಿದ್ದು, ಆಗಸ್ಟ್‌ನಲ್ಲಿ ಬಿಸ್ವಾಲ್ ಟ್ರೇಡ್‌ಲಿಂಕ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್ ಅವರನ್ನು ಬಂಧಿಸಲಾಗಿತ್ತು. ಅವರು 68.2 ಕೋಟಿ ರೂ. ಮೌಲ್ಯದ ನಕಲಿ ಗ್ಯಾರಂಟಿಗಳನ್ನು ರಿಲಯನ್ಸ್ ಪವರ್ ಪರವಾಗಿ ಸಲ್ಲಿಸಿದ್ದರು ಎಂದು ಆರೋಪಿಸಲಾಗಿದೆ.








