ಬೆಂಗಳೂರು
ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವೃದ್ಧರೂ ಕೂಡ ಅಂಜನಾದ್ರಿ ಬೆಟ್ಟದ ಮೇಲೆ ಹೋಗಿ ಆಂಜನೇಯನ ದರ್ಶನ ಪಡೆದು ಪ್ರದಕ್ಷಿಣೆ ಹಾಕುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಪ್ರವಾಸೋದ್ಯಮದ ಜೊತೆಗೆ ಈ ಸ್ಥಳದ ಪೌರಾಣಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಎತ್ತಿಹಿಡಿಯುವಂತೆ ಅಭಿವೃದ್ಧಿಪಡಿಸಲು ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ದೇಶೀ ಮತ್ತು ವಿದೇಶೀ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷವಾಗಿ ಹನುಮ ಜಯಂತಿಯ ಸಮಯದಲ್ಲಿ ಯಾತ್ರಿಕರ ಸಂಖ್ಯೆ ಅಪಾರವಾಗಿರುತ್ತದೆ. ಆದ್ದರಿಂದ, ಇಲ್ಲಿ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಗತ್ಯ. ಈ ಬಗ್ಗೆ ಎಲ್ಲಾ ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಸಿಎಂ ಸೂಚನೆ ನೀಡಿದ್ದಾರೆ. ಇನ್ನು ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಬಗ್ಗೆ ಏನೆಲ್ಲಾ ತೀರ್ಮಾನ ಕೈಗೊಳ್ಳಲಾಯ್ತು ಎನ್ನುವ ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.
ಸಭೆಯ ಮುಖ್ಯಾಂಶಗಳು
- ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಯಾತ್ರಿಕರು ಉಳಿದುಕೊಳ್ಳಲು ಡಾರ್ಮೆಟರಿ ವ್ಯವಸ್ಥೆ, ಹಿರಿಯ ಭಕ್ತಾಧಿಗಳು ಬೆಟ್ಟವೇರಲು ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ, ಸಮುದಾಯ ಭವನ ನಿರ್ಮಾಣ ಹಾಗೂ ಇತರ ಪ್ರವಾಸಿ ಸೌಲಭ್ಯಗಳು ಸೇರಿ ಕ್ಷೇತ್ರದ ಸುತ್ತ ಮುತ್ತ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ.
- ಈ ಕ್ಷೇತ್ರಕ್ಕೆ ಹಂತ-1 ಮತ್ತು ಹಂತ-2ರಲ್ಲಿ ರೂ.200.00 ಕೋಟಿಗಳ ಕಾಮಗಾರಿಗಳು ಮಂಜೂರಾಗಿದ್ದು, ಈವರೆಗೆ ಈ ಕಾಮಗಾರಿಗಳಿಗೆ ರೂ.10.00 ಕೋಟಿಗಳನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದ್ದು, ಬಾಕಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ.
- ಮಂಜೂರಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಿ ಜಮೀನಿನ ಕೊರತೆ ಇರುವುದರಿಂದ, ಪ್ರಸ್ತಾಪಿಸಿರುವ 77.28 ಖಾಸಗಿ ಜಮೀನನ್ನು ಅನುದಾನದ ಕೊರತೆಯಿರುವುದರಿಂದ ಈವರೆಗೂ ಭೂ-ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.ಆದ್ದರಿಂದ, ಹೆಚ್ಚುವರಿ ಜಮೀನು ಒಳಗೊಂಡಂತೆ ಒಟ್ಟು 101 ಎಕರೆ 30 ಗುಂಟೆ ಖಾಸಗಿ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯವಾಗಿರುವ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಒದಗಿಸಲಾಗುವುದು.
- ಮಂಜೂರಾಗಿರುವ ಬಹುತೇಕ ಕಾಮಗಾರಿಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಕೈಗೊಳ್ಳಬೇಕಿರುವುದರಿಂದ, ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ NOC ನೀಡಬೇಕಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
- 2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅಂಜನಾದ್ರಿ ಬೆಟ್ಟವೂ ಒಳಗೊಂಡಂತೆ ರಾಜ್ಯದ 11 ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರೋಪ್ ವೇಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಅನುಮೋದನೆ ನೀಡಲಾಗಿದೆ.
